ಭಟ್ಕಳ ಡೈರಿ ವರದಿ

ಭಟ್ಕಳ: ಮುರುಡೇಶ್ವರದ ಪಟ್ರಗದ್ದೆಯಲ್ಲಿ ಮಂಗಳವಾರ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ವಿಶೇಷ ಕಾರ್ಯಕ್ರಮ ಆತ್ಮೀಯ ವಾತಾವರಣದಲ್ಲಿ ನಡೆಯಿತು.

ಕಾರ್ಯಕ್ರಮದ ವಿಶೇಷತೆಯಾಗಿ ಮಹಿಳೆಯರು ತಮ್ಮ ಮನೆಗಳಲ್ಲಿಯೇ ತಯಾರಿಸಿಕೊಂಡು ತಂದ ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಿದರು. ಬೈಲೂರು ವಲಯ ಮಟ್ಟದ ಕಾರ್ಯಕ್ರಮವಾಗಿದ್ದರಿಂದ ವಲಯ ವ್ಯಾಪ್ತಿಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇದೊಂದು ಹೃದಯಗಳ ಸಂಗಮದ ಕಾರ್ಯಕ್ರಮ. ಇಲ್ಲಿ ಅಬ್ಬರ, ಆಡಂಬರಕ್ಕಿಂತ ಆತ್ಮೀಯತೆ ಮತ್ತು ಪ್ರೀತಿಗೆ ಹೆಚ್ಚಿನ ಮಹತ್ವವಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುಟ್ಟ ಕಂದಮ್ಮ ತನೀಷ ಕೇಸವ ನಾಯ್ಕ ಅವರಿಗೆ ಅನ್ನಪ್ರಾಶನ ನೆರವೇರಿಸಲಾಯಿತು. ಈ ವೇಳೆ ಮಗುವಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಜೀವನದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸಲಾಯಿತು. ನಂತರ ಗರ್ಭಿಣಿ ಹೇಮಾ ಈಶ್ವರ ನಾಯ್ಕ ಅವರಿಗೆ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಸೀಮಂತ ಕಾರ್ಯಕ್ರಮ ನೆರವೇರಿಸಿ, ಉಡಿ ತುಂಬಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾವಳ್ಳಿ–೧ ಪಂಚಾಯಿತಿ ಸಿಬ್ಬಂದಿಗಳಾದ ಉಮೇಶ ದೇವು ಪಟಗಾರ, ಗಜಾನನ ಗೊಂಡ, ಗ್ರಾಮ ಸಂಪನ್ಮೂಲ ವ್ಯಕ್ತಿ ಶಿಲ್ಪಾ ನಾಯ್ಕ, ಅಂಗನವಾಡಿ ಮೇಲ್ವಿಚಾರಕಿ ಕಾಮಾಕ್ಷಿ ಗೌಡ, ಭಾರತಿ ನಾಯ್ಕ, ಮೀನಾಕ್ಷಿ ಹರಿಕಾಂತ, ಹೇಮಲತಾ ದೇವಾಡಿಗ ಹಾಗೂ ಜ್ಯೋತಿ ನಾಯ್ಕ ಸೇರಿದಂತೆ ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.

ಸರಳತೆ, ಆತ್ಮೀಯತೆ ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ಸಾರಿದ ಕಾರ್ಯಕ್ರಮವು ಭಾಗವಹಿಸಿದವರ ಮನದಲ್ಲಿ ಹೃದಯಸ್ಪರ್ಶಿ ನೆನಪಾಗಿ ಉಳಿಯಿತು.

ಇದನ್ನೂ ಓದಿ : 

ಭಟ್ಕಳದಲ್ಲಿ ಬೋಲೆರೋ ಚಾಲಕನಿಂದ ₹೧೫ ಸಾವಿರ ಕಸಿದುಕೊಂಡ ಆರೋಪ; ಸ್ಕೂಟಿ ಸವಾರನ ವಿರುದ್ಧ ದೂರು

ಭಟ್ಕಳದಲ್ಲಿ ಅಕ್ರಮ ಮದ್ಯ ಮಾರಾಟ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಎರಡು ಪ್ರಕರಣ ದಾಖಲು

ಭಟ್ಕಳದಲ್ಲಿ ಓಸಿ-ಮಟಕಾ ಜುಗಾರಾಟ: ಐವರ ವಿರುದ್ಧ ಪ್ರಕರಣ ದಾಖಲು