ಭಟ್ಕಳ ಡೈರಿ ವರದಿ

ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಮದ್ಯ ಮಾರಾಟ ಹಾಗೂ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಾರುತಿ ನಗರದಲ್ಲಿ ದಾಳಿ: ಮಣ್ಕುಳಿಯ ಮಾರುತಿ ನಗರದಲ್ಲಿ ಗೂಡಂಗಡಿ ವ್ಯಾಪಾರಿ ತಿರುಮಲ ತಂದೆ ವೆಂಕಟ್ರಮಣ ನಾಯ್ಕ (೩೫) ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್‌ಐ (ತನಿಖೆ–೨) ಸೋಮರಾಜ ರಾಠೋಡ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಯ ವಶದಲ್ಲಿ ಮದ್ಯ ತುಂಬಿದ್ದ ಮೂರು ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಅವುಗಳ ಅಂದಾಜು ಮೌಲ್ಯ ₹೧೬೫ ಎಂದು ತಿಳಿಸಲಾಗಿದೆ. ಈ ಕುರಿತು ಪಿಎಸ್‌ಐ ಸೋಮರಾಜ ರಾಠೋಡ ಅವರು ಸರ್ಕಾರದ ಪರವಾಗಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಾಲಿ ತಲಗೇರಿಯಲ್ಲಿ ಮದ್ಯ ಮಾರಾಟ ಆರೋಪ: ಇನ್ನೊಂದು ಪ್ರಕರಣದಲ್ಲಿ, ಜಾಲಿ ತಲಗೇರಿ ನಿವಾಸಿ ಕಾವೇರಿ ಮಾದೇವ ನಾಯ್ಕ ಎಂಬವರ ವಿರುದ್ಧ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ ೨೧ರಂದು ರಾತ್ರಿ ಸುಮಾರು ೮.೫೦ರ ವೇಳೆಗೆ ಜಾಲಿ ತಲಗೇರಿಯ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಕರ್ನಾಟಕ ರಾಜ್ಯದ ವಿವಿಧ ಮಾದರಿಯ ಮದ್ಯದ ಪ್ಯಾಕೆಟ್‌ಗಳು ಹಾಗೂ ಬಾಟಲಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟುಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಿಎಸ್‌ಐ ತನಿಖೆ–೧ ತಿಮ್ಮಪ್ಪ ಎಸ್ ಅವರು ನಡೆಸಿದ ದಾಳಿಯ ಸಂದರ್ಭದಲ್ಲಿ ಸುಮಾರು ₹೬,೬೩೦ ಮೌಲ್ಯದ ಮದ್ಯದ ಪ್ಯಾಕೆಟ್‌ಗಳು ಮತ್ತು ಬಾಟಲಿಗಳು ಪತ್ತೆಯಾಗಿವೆ ಎನ್ನಲಾಗಿದೆ. ದಾಳಿ ವೇಳೆ ಆರೋಪಿತೆ ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿಯೇ ಬಿಟ್ಟುಹೋದ ಮದ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ ೩೨ ಮತ್ತು ೩೪ರ ಅನ್ವಯ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ:

ಭಟ್ಕಳದಲ್ಲಿ ಓಸಿ-ಮಟಕಾ ಜುಗಾರಾಟ: ಐವರ ವಿರುದ್ಧ ಪ್ರಕರಣ ದಾಖಲು

ಭಟ್ಕಳದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಆರೋಪ: ₹೭೫ ಲಕ್ಷ ಅಡಮಾನ ಸಾಲ ಪಡೆದಿರುವ ಬಗ್ಗೆ ದೂರು