ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಹಾಗೂ ಭಟ್ಕಳ ಶಹರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರಗದ್ದೆ, ವೆಂಕಟಾಪುರ ನಿವಾಸಿ ಚಂದ್ರ ತಂದೆ ಶೇಷ ನಾಯ್ಕ (೪೨) ವಿರುದ್ಧ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ ೨೨ರಂದು ಮಧ್ಯಾಹ್ನ ಸುಮಾರು ೨.೪೫ರ ವೇಳೆಗೆ ಹಿಂದೂ ಕಾಲೋನಿ, ವೆಂಕಟಾಪುರದ ಗೂಡಗಂಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ತನ್ನ ಲಾಭಕ್ಕಾಗಿ ಓಸಿ ಜುಗಾರಾಟ ನಡೆಸುತ್ತಿದ್ದ ಎನ್ನಲಾಗಿದೆ.

ಒಂದು ರೂಪಾಯಿಗೆ ೮೦ ರೂಪಾಯಿ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತನ ಬಳಿಯಿಂದ ಓಸಿ ಚೀಟಿ, ಬಾಲ್ ಪೆನ್ ಹಾಗೂ ೫೦೦ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕೆ.ಪಿ. ಆಕ್ಟ್ ಕಲಂ ೭೮(೩)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನೊಂದು ಪ್ರಕರಣ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಲಗೇರಿ, ಜಾಲಿ ನಿವಾಸಿ ನಾಗರಾಜ ತಂದೆ ವೆಂಕಟಪ್ಪ ನಾಯ್ಕ (೨೭) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೆಪ್ಟೆಂಬರ್ ೨೨ರಂದು ಬೆಳಗ್ಗೆ ಸುಮಾರು ೧೧ ಗಂಟೆಗೆ ಭಟ್ಕಳ ಶಹರದ ಕೋಲಾ ಪ್ಯಾರಡೇಸ್ ಸಮೀಪದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕರಿಂದ ಹಣ ಪಡೆದು ಓಸಿ-ಮಟಕಾ ಅಂಕೆ-ಸಂಖ್ಯೆಗಳ ಮೇಲೆ ಪಂಥ ಕಟ್ಟಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ ೮೨೦ ರೂಪಾಯಿ ನಗದು ಹಣ ಹಾಗೂ ಓಸಿ-ಮಟಕಾ ಜುಗಾರಾಟಕ್ಕೆ ಬಳಸಲಾಗುತ್ತಿದ್ದ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.