ಭಟ್ಕಳ ಡೈರಿ ವರದಿ
ಭಟ್ಕಳ: ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲ್ ಚಲಾಯಿಸಿದ ಪರಿಣಾಮ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಘಟನೆ ಭಟ್ಕಳದ ಎನ್‌ಎಚ್-೬೬ ರಸ್ತೆಯಲ್ಲಿ ಸೆಪ್ಟೆಂಬರ್ ೨೨ರಂದು ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ಶಿಕ್ಷಕರೊಬ್ಬರು ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ ಎಂದು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಭಟ್ಕಳ ತಾಲೂಕಿನ ಬೆಳಕೆ ನಿವಾಸಿ ಹಾಗೂ ಶಿಕ್ಷಕರಾದ ಕೃಷ್ಣಾ ತಿಮ್ಮಪ್ಪ ಮೊಗೇರ (೫೬) ಅವರು ಸೆಪ್ಟೆಂಬರ್ ೨೨ರಂದು ಬೆಳಗ್ಗೆ ಸುಮಾರು ೮.೧೦ರ ವೇಳೆಗೆ ಸ್ಕೂಟರ್‌ನಲ್ಲಿ ಗೊರಟೆ ಕಡೆಯಿಂದ ಭಟ್ಕಳದತ್ತ ಎನ್‌ಎಚ್-೬೬ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಭಟ್ಕಳ ಸ್ಟೇಟ್ ಬ್ಯಾಂಕ್ ಕಡೆಯಿಂದ ನಿಶಾಂತ ಆಸ್ಪತ್ರೆ ಎದುರಿನ ಎನ್‌ಎಚ್-೬೬ ರಸ್ತೆಯ ಕಡೆಗೆ ಮೊಹಮ್ಮದ್ ರಜಾನ್ ಎಂಬವರು ಮೋಟಾರ್ ಸೈಕಲ್‌ನಲ್ಲಿ ಬರುತ್ತಿದ್ದರು ಎನ್ನಲಾಗಿದೆ.
ಮೋಟಾರ್ ಸೈಕಲ್ ಅನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದ ಅವರು, ಎದುರುಗಡೆಯಿಂದ ಬರುತ್ತಿದ್ದ ಕೃಷ್ಣಾ ಮೊಗೇರ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಡಿಕ್ಕಿಯ ಪರಿಣಾಮ ಕೃಷ್ಣಾ ಮೊಗೇರ ಅವರ ಎಡಗೈ, ಬಲಗಾಲು ಹಾಗೂ ಎಡಗಾಲಿನ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ ಮೊಹಮ್ಮದ್ ರಜಾನ್ ಅವರಿಗೂ ತಲೆಯ ಹಿಂಭಾಗ ಹಾಗೂ ಎಡಗೈ ಗಂಟಿನ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಕುರಿತು ಕೃಷ್ಣಾ ಮೊಗೇರ ಅವರು ಸೆಪ್ಟೆಂಬರ್ ೨೨ರಂದು ರಾತ್ರಿ ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಭಟ್ಕಳದ ಎಐಟಿಎಂನಲ್ಲಿ ಐಒಟಿ ಕ್ಲಬ್ ಉದ್ಘಾಟನೆ
ಪೌಷ್ಟಿಕ ಆಹಾರ ಸಪ್ತಾಹ: ಪಟ್ರಗದ್ದೆಯಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ
ಭಟ್ಕಳದಲ್ಲಿ ಬೋಲೆರೋ ಚಾಲಕನಿಂದ ₹೧೫ ಸಾವಿರ ಕಸಿದುಕೊಂಡ ಆರೋಪ; ಸ್ಕೂಟಿ ಸವಾರನ ವಿರುದ್ಧ ದೂರು

