ಭಟ್ಕಳ ಡೈರಿ ವರದಿ
ಮುರ್ಡೇಶ್ವರ: ಹಿರಿಯ ವೈದ್ಯ, ಯಕ್ಷಗಾನ ಪ್ರೇಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ ಐ ಆರ್ ಭಟ್ಟ ಎಂದೇ ಪರಿಚಿತರಾಗಿದ್ದ ಇನ್ನಂಜೆ ರಾಜಗೋಪಾಲ ಭಟ್ಟ (೮೫) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಉಡುಪಿ ಜಿಲ್ಲೆಯ ಇನ್ನಂಜೆಯಲ್ಲಿ ಜನಿಸಿದ ರಾಜಗೋಪಾಲ ಭಟ್ಟ ಅವರು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ಮುರ್ಡೇಶ್ವರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದರು. ಕಳೆದ ಹಲವು ವರ್ಷಗಳಿಂದ ಮುರ್ಡೇಶ್ವರದ ರಾಜ್ ಕ್ಲಿನಿಕ್ ಮೂಲಕ ಜನಮೆಚ್ಚಿನ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ವೈದ್ಯಕೀಯ ಸೇವೆಯ ಜೊತೆಗೆ ಯಕ್ಷಗಾನದ ಮೇಲೂ ಅವರಿಗೆ ಅಪಾರ ಆಸಕ್ತಿ ಇತ್ತು. ಮುರ್ಡೇಶ್ವರದಲ್ಲಿ ‘ಯಕ್ಷರಕ್ಷೆ’ ಸಂಸ್ಥೆಯನ್ನು ಸ್ಥಾಪಿಸಿ ಹಲವು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಿರಾಲಿಯ ಡಾ ಸರಾಫ್ ಅವರೊಂದಿಗೆ ಸೇರಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಹಾಗೂ ಅವರಿಂದ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸುವ ಕಾರ್ಯಕ್ಕೂ ಅವರು ಸಹಕಾರ ನೀಡಿದ್ದರು. ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದ ಡಾ ಭಟ್ಟ ಅವರು ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವಿವಿಧ ಸಾಮಾಜಿಕ ಹಾಗೂ ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು ವಯೋಸಹಜ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ವೈದ್ಯಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ :

