ನುಡಿ ನಮನ: ಪಿ ಆರ್ ನಾಯ್ಕ, ಹೊಳೆಗದ್ದೆ, ಕುಮಟಾ

ಒಳಿತು ಮಾಡಿದರೆ ಪುಣ್ಯಗಳ ರಾಶಿ

ಕೆಡಕು ಮಾಡಿದರೆ ಪಾಪ ಬಿಕನಾಶಿ

ಯಾವ ದೇವರ ಪೂಜೆ ಮಾಡಿದರೂ ವ್ಯರ್ಥ 

ಜನಸೇವೆಯೇ ಪೂಜೆ ಅದುವೇ ಪುರುಷಾರ್ಥ 

– ದಿನಕರ ದೇಸಾಯಿಯವರ ಈ ಚುಟುಕನ್ನು ತನ್ನ ಬದುಕಿಗಂಟಿಸಿಕೊಂಡು ಜನಸೇವೆಯ ಮೂಲಕ ಜನಾನುರಾಗಿ ವ್ಯಕ್ತಿಯಾಗಿ, ವೈದ್ಯರಾಗಿ ಮುರುಡೇಶ್ವರದ ತುಂಬೆಲ್ಲ ಮನೆಮಾತಾದವರು ಇನ್ನಂಜೆ ರಾಜಗೋಪಾಲ ಭಟ್ ರವರು.

ಉಡುಪಿಯ ಇನ್ನಂಜೆಯಲ್ಲಿ ಸಾಮಾನ್ಯ ಕೃಷಿ ಕುಟುಂಬದಲ್ಲಿ ತಂದೆ ಅಚ್ಯುತ ಭಟ್ಟ ಮತ್ತು ತಾಯಿ ವನಜಾಕ್ಷಿಯವರ ಮಗನಾಗಿ ೧೯೪೨ರಲ್ಲಿ ಜನಿಸಿದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸ್ವಂತ ಊರಿನಲ್ಲಿ ಪೂರೈಸಿ, ನಂತರ ಮೈಸೂರಿನಲ್ಲಿ ವೈದ್ಯ ವಿದ್ಯಾಭ್ಯಾಸವನ್ನು ಪೂರೈಸಿ, ೧೯೬೭ರಲ್ಲಿ ಮುರುಡೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಹುದ್ದೆಯನ್ನು ಕರೆದಾಗ ಅಜಿ೯ ಹಾಕಿ ಆಗಿನ ಬೋರ್ಡ್ ಕಮಿಟಿಯಲ್ಲಿ ಮಾವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ನೇಮಕರಾದರು. ಸುಮಾರು ೨೦ ವರ್ಷಗಳ ಕಾಲ ಇವರು ಸಲ್ಲಿಸಿದ ಸೇವೆ ಯಾರೂ ಮರೆಯುವಂತಿಲ್ಲ.

ಜನಸೇವೆಯ ಮೂಲಕ ಜನಾನುರಾಗಿ ವ್ಯಕ್ತಿಯಾಗಿ ೧೯೮೭ರಲ್ಲಿ ಮುರುಡೇಶ್ವರದಲ್ಲಿ “ರಾಜ್ ಕ್ಲಿನಿಕ್” ಎಂಬ ಆಸ್ಪತ್ರೆ “ಭಟ್ಟರ ಕ್ಲಿನಿಕ್” ಎಂದೇ ಹೆಸರಾಯಿತು. “ಜನಸೇವೆಯೇ ಜನಾರ್ಧನನ ಸೇವೆ”ಎಂದು ತಿಳಿದು ಮಧ್ಯರಾತ್ರಿಯಲ್ಲಿ ರೋಗಿಗಳು ಬಂದರೂ ಉಪಚರಿಸಿ ಔಷಧಿ ಕೊಟ್ಟು ವೃತ್ತಿ ಬದುಕಿನ ಪವಿತ್ರತೆಗಾಗಿ ಹಗಲಿರುಳು ದುಡಿದ ಅಪರೂಪದ ಸಜ್ಜನ ವ್ಯಕ್ತಿಗಳು ನೀಡಿದ ಔಷಧದಿಂದಲೇ ರೋಗಗಳು ವಾಸಿಯಾಗುತ್ತಿದ್ದವು.

ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಇದ್ದ ವೈದ್ಯರು ಗ್ರಾಮೀಣ ಭಾಗದ ಜನರ ನಾಡಿಮಿಡಿತದಂತಾದರು. ಕರ್ಮ ಯೋಗಿಯಾಗಿ ಮೇಲು- ಕೀಳು, ಬಡವ- ಬಲ್ಲಿದ ಎಂಬ ಯಾವ ಭೇದವಿಲ್ಲದೆ ವೈದ್ಯರಾಗಿ, ಸಮಾಜಸೇವಕರಾಗಿ, ಸಂಘಟಕರಾಗಿ, ಸಾಹಿತ್ಯ ಆರಾಧಕರಾಗಿ, ಸಾಹಿತ್ಯ ಪರಿಷತ್ತಿಗೆ ಮಾರ್ಗದರ್ಶಕರಾಗಿ ಗುರುತಿಸಿಕೊಂಡರು.

“ಯಕ್ಷರಕ್ಷೆ” ಸ್ಥಾಪನೆ:

ತನ್ನ ಸುತ್ತಮುತ್ತಲಿನ ಕಲಾವಿದರನ್ನು, ಯಕ್ಷಕಲೆಯನ್ನು, ವಿವಿಧ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರಣಕ್ಕಾಗಿ “ಯಕ್ಷರಕ್ಷೆ” ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು. ಯಕ್ಷರಂಗ ವೇದಿಕೆಯು ಅವರ ಕನಸಿನ ಕೂಸಾಗಿತ್ತು. ಯಕ್ಷ ಕಲಾ ಚಿಂತಕರ ಆಲೋಚನೆಯೊಂದಿಗೆ ಹುಟ್ಟಿಕೊಂಡ ಯಕ್ಷರಕ್ಷೆಯ ಅಧ್ಯಕ್ಷರಾಗಿ ಯಕ್ಷಗಾನ ರಂಗದ ವೇದಿಕೆಯ ಮೂಲಕ ಅನೇಕ ಸಾಮಾಜಿಕ ಕಾರ್ಯಗಳು ಇವರಿಂದಾದವು. ಮಕ್ಕಳಿಗಾಗಿ ಚಿಣ್ಣರ ಯಕ್ಷಗಾನ ತರಬೇತಿ ಆಯೋಜಿಸಿ, ಮದ್ದಳೆ ವಾದಕ ಕೊಪ್ಪದಮಕ್ಕಿ ಈರಪ್ಪ ಭಾಗವತರಿಗೆ ತಮ್ಮ ಮನೆಯಲ್ಲಿ ಊಟ, ವಸತಿ ಒದಗಿಸಿ ಯಕ್ಷಗಾನ, ನಾಟ್ಯಾಭ್ಯಾಸ, ಕುಣಿತ ಕಲಿಸಿಕೊಟ್ಟು ಸ್ವಂತ ಪರಿಶ್ರಮದ ಮೂಲಕ ಯಕ್ಷರಕ್ಷೆ ನಾಡಿಗೆ ಪರಿಚಿತವಾಯಿತು. ಯಾವ ಫಲಾಪೇಕ್ಷೆ ಇಲ್ಲದೆ ಅನೇಕ ಹಿರಿ-ಕಿರಿಯ ಕಲಾವಿದರನ್ನು ಸಂಘಟಕರನ್ನು, ಸಂಘಟನೆಯವರನ್ನು ಪುರಸ್ಕರಿಸಿ ಅವರ ಸಾಧನೆಯನ್ನು ಕೊಂಡಾಡಿದರು. ಅನೇಕ ಕಲಾವಿದರ ಹುಟ್ಟಿಗೂ ಈ ಸಂಸ್ಥೆ ಕಾರಣವಾಯಿತು.

ಮುರುಡೇಶ್ವರದ ವೀರಾಂಜನೇಯ ಕಲಾಸಂಘದ ಸಂಘಟನೆಯಲ್ಲಿ ತೊಡಗಿಸಿಕೊಂಡು ಎಲ್ಲಾ ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಇವರ ಸಂಘಟನೆ ಸಾರ್ಥಕವಾಗಿದೆ. ಸುಮಾರು ೧೨ ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯನ್ನು ಮುಂದುವರಿಸಿದ ಒಬ್ಬ ಅಪರೂಪದ ಹೃದಯವಂತರಾಗಿ ವೈದ್ಯರಾಗಿದ್ದರು. ಕೊರೋನಾ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ರೋಗಿಗಳಿಗೆ ಉಚಿತ ಸೇವೆ ನೀಡಿ ವೈದ್ಯ “ರಾಜಗೋಪಾಲ” ಎಲ್ಲರಿಗೂ ಬೇಕಾದ “ರಾಜರಾಗಿ” ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿಗಳಾಗಿದ್ದರು.

ಅವರ ವಿಶಿಷ್ಟ ಸೇವೆಯನ್ನು ಪರಗಣಿಸಿ ಅವರ ಶಿಷ್ಯ, ಸಾಹಿತಿ ಸುರೇಶ ನಾಯ್ಕರವರು “ಯಕ್ಷ ಧನ್ವಂತರಿ” ಅಭಿನಂದನಾ ಗ್ರಂಥ ಪ್ರಕಟಿಸಿ ಅವರಿಗೆ ಅರ್ಪಿಸಿರುತ್ತಾರೆ. ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ಇವರನ್ನರಿಸಿ ಬಂದಿದೆ. ಮಕ್ಕಳಾದ ರಾಜೇಶ್ವರಿ ಭಟ್, ಅನುರಾಧ ಭಟ್, ರಾಘವ ಭಟ್, ಸೌಜನ್ಯ ಭಟ್ ರವರೊಂದಿಗೆ ತುಂಬು ಜೀವನ ನಡೆಸುತ್ತಿದ್ದ ಡಾಕ್ಟರ್ ಐ ಆರ್ ಭಟ್ಟರು ಸುಮಾರು ೮೪ ವಸಂತಗಳನ್ನು ಪೂರೈಸಿ ಇಂದು ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ. ಅವರ ಸ್ವಾರ್ಥವಿಲ್ಲದ ಸೇವಾ ಮನೋಭಾವ ಇಡೀ ಸಮಾಜಕ್ಕೆ ಮಾದರಿಯಾಗಲಿ.

ಇದನ್ನೂ ಓದಿ:

ಮುರ್ಡೇಶ್ವರದ ಹಿರಿಯ ವೈದ್ಯ ನಿಧನ

ಭಟ್ಕಳದ ಮಹಾಲೆಮನೆ ಗಣೇಶೋತ್ಸವ ಸಂಪನ್ನ: ೧೧ ದಿನಗಳ ಸಂಭ್ರಮಕ್ಕೆ ತೆರೆ