ಭಟ್ಕಳ ಡೈರಿ ವರದಿ
ಭಟ್ಕಳ: ಮುರ್ಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ ೫೦ನೇ ವರ್ಷದ ಸುವರ್ಣ ಸಂಭ್ರಮದ ಅಂಗವಾಗಿ ಹನ್ನೊಂದು ದಿನಗಳ ಕಾಲ ನಡೆದ ಅದ್ದೂರಿ ಆಚರಣೆಯ ಕೊನೆಯ ದಿನ ಮುಡಿಗಂಧ ಪ್ರಸಾದದ ಹರಾಜು ವಿಶೇಷ ಗಮನ ಸೆಳೆಯಿತು.
ಹರಾಜಿನಲ್ಲಿ ದೇವರ ಮುಡಿಗಂಧ ಪ್ರಸಾದವನ್ನು ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ ಅವರು ₹೧೧ ಲಕ್ಷದ ೧೦ ಸಾವಿರಕ್ಕೆ ಪಡೆದುಕೊಂಡರು. ಮುರ್ಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಇತಿಹಾಸದಲ್ಲೇ ಇದು ಮುಡಿಗಂಧ ಪ್ರಸಾದ ಹರಾಜಾದ ಅತ್ಯಂತ ಗರಿಷ್ಠ ಮೊತ್ತವಾಗಿದೆ ಎಂದು ತಿಳಿಸಲಾಗಿದೆ.
ಏನಿದು ಮುಡಿಗಂಧ ಪ್ರಸಾದ?:
ದೇವರಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಸಿರಿಮುಡಿಗೆ ಮುಡಿಸುವ ಹೂವು, ತುಳಸಿ, ಶ್ರೀಗಂಧ, ಕುಂಕುಮ ಹಾಗೂ ನೈವೇದ್ಯದಂತಹ ವಸ್ತುಗಳನ್ನು ಮುಡಿಗಂಧ ಪ್ರಸಾದ ಎಂದು ಕರೆಯಲಾಗುತ್ತದೆ. ಭಕ್ತರು ಇದನ್ನು ಅತ್ಯಂತ ಪವಿತ್ರವಾದ ಪ್ರಸಾದವಾಗಿದ್ದು, ದೇವರ ನೇರ ಆಶೀರ್ವಾದದ ಸಂಕೇತವೆಂದು ನಂಬುತ್ತಾರೆ.
೫೦ನೇ ವರ್ಷದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಮುರ್ಡೇಶ್ವರ ಒಲಗ ಮಂಟಪದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸೆಪ್ಟೆಂಬರ್ ೧೪ರಿಂದ ೨೪ರವರೆಗೆ ಹನ್ನೊಂದು ದಿನಗಳ ಕಾಲ ಆಯೋಜಿಸಲಾಗಿತ್ತು. ಸುಮಾರು ₹೧ ಕೋಟಿ ವೆಚ್ಚದಲ್ಲಿ ನಡೆದ ಈ ಬೃಹತ್ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆದವು.
ಕೊನೆಯ ದಿನ ಗುರುವಾರ ಸಂಜೆ ಒಲಗ ಮಂಟಪದ ಶ್ರೀ ಗಣೇಶನನ್ನು ಮುರ್ಡೇಶ್ವರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮುಡಿಗಂಧ ಪ್ರಸಾದವನ್ನು ₹೧೧ ಲಕ್ಷದ ೧೦ ಸಾವಿರಕ್ಕೆ ಉದ್ಯಮಿ ನೇತ್ರಾಣಿ ಗಣೇಶ ಹರಿಕಾಂತ ಅವರು ಪಡೆದುಕೊಂಡರು.
ಸುವರ್ಣ ಸಂಭ್ರಮದ ಹಿನ್ನೆಲೆ ಮತ್ತು ಭಕ್ತರ ಅಪಾರ ಭಾಗವಹಿಸುವಿಕೆಯಿಂದ ಈ ವರ್ಷದ ಗಣೇಶೋತ್ಸವ ವಿಶೇಷ ಮೆರುಗು ಪಡೆದುಕೊಂಡಿದ್ದು, ದಾಖಲೆ ಮೊತ್ತದ ಮುಡಿಗಂಧ ಪ್ರಸಾದ ಹರಾಜು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.
ಇದನ್ನೂ ಓದಿ :
ಜನಸೇವೆಯ ಜನಾನುರಾಗಿ ವ್ಯಕ್ತಿ ಮುರುಡೇಶ್ವರದ ವೈದ್ಯ ಇನ್ನಂಜೆ ರಾಜಗೋಪಾಲ ಭಟ್
ಭಟ್ಕಳದ ಮಹಾಲೆಮನೆ ಗಣೇಶೋತ್ಸವ ಸಂಪನ್ನ: ೧೧ ದಿನಗಳ ಸಂಭ್ರಮಕ್ಕೆ ತೆರೆ

