ಭಟ್ಕಳ ಡೈರಿ ವರದಿ

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕಿನ ಶಿರಾಲಿಯ ಶ್ರೀವಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಮೂವರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಸೆ ೨೫ರಂದು ನಡೆದ ೨೦೨೬–೨೭ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಶ್ರೀ ಚಿತ್ರಾಪುರ ಮಠದ ಸ್ವಾಯತ್ತತೆಗೆ ಒಳಪಟ್ಟಿರುವ ಶ್ರೀವಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಿಶನ್‌ಗೆ ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ:

ಕಾಲೇಜಿನ ವಿದ್ಯಾರ್ಥಿ ಕಿಶನ್ ಮಂಜುನಾಥ ನಾಯ್ಕ ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ವೇಳೆ ೪×೧೦೦ ಮೀಟರ್ ರಿಲೇ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಚರಣ ಲೋಕೇಶ ದೇವಾಡಿಗ ೪×೪೦೦ ಮೀಟರ್ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರುಣ ದೇವೇಂದ್ರ ನಾಯ್ಕ ೮೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತೊಂದು ಗರಿಮೆ ತಂದಿದ್ದಾರೆ.

ಎರಡನೇ ವರ್ಷದಲ್ಲೇ ರಾಜ್ಯಮಟ್ಟಕ್ಕೆ ಆಯ್ಕೆ:

ಶ್ರೀವಲಿ ಪದವಿ ಪೂರ್ವ ಕಾಲೇಜು ೨೦೨೫ರಲ್ಲಿ ಆರಂಭಗೊಂಡಿದ್ದು, ಕೇವಲ ಎರಡನೇ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ.

ತರಬೇತುದಾರರಿಗೆ ಅಭಿನಂದನೆ: ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಮುಖ್ಯ ತರಬೇತುದಾರರಾದ ಕುಲದೀಪ ನಾಯ್ಕ ಮಾರ್ಗದರ್ಶನವೂ ಪ್ರಮುಖವಾಗಿದೆ. ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ತರಬೇತುದಾರ ಕುಲದೀಪ ನಾಯ್ಕ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಉತ್ತರ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಊರ ನಾಗರಿಕರು ಅಭಿನಂದಿಸಿದ್ದಾರೆ.

 

ಇದನ್ನೂ ಓದಿ:

ಭಟ್ಕಳದಲ್ಲಿ ಕಳೆದೊಂದು ವಾರ: ಅಕ್ರಮ ಚಟುವಟಿಕೆ, ಅಭಿವೃದ್ಧಿ ಯೋಜನೆ, ಪರಿಸರ ಚರ್ಚೆ, ಶಿಕ್ಷಣ ಸಾಧನೆ

ಮಾರುಕೇರಿಯಲ್ಲಿ ಪ್ರಜಾಸೇವೆ ಆಂದೋಲನ: ರಸ್ತೆ, ಆರೋಗ್ಯ, ಬಸ್, ನೀರು ಸೇರಿದಂತೆ ಹಲವು ಸಮಸ್ಯೆಗಳ ಪ್ರಸ್ತಾಪ