ಭಟ್ಕಳ ಡೈರಿ ವರದಿ
ಭಟ್ಕಳ: ರಸ್ತೆ ದಾಟುತ್ತಿದ್ದ ಕಾರ್ಮಿಕನಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಭಟ್ಕಳ ತಾಲೂಕಿನ ಗೊರಟೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಸೆಪ್ಟೆಂಬರ್ ೨೫ರಂದು ನಡೆದಿದೆ. ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಪ್ರಮೋದ ಕುಮಾರ (೩೩) ಗಾಯಗೊಂಡಿದ್ದು, ಬೈಕ್ ಸವಾರ ಮುತಮ್ಮಿಮ್ (೨೦) ಕೂಡ ಗಾಯಗೊಂಡಿದ್ದಾರೆ ಎಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ವಿವರ: ಉತ್ತರ ಪ್ರದೇಶದ ಅಲಹಾಬಾದ್ (ಪ್ರಯಾಗರಾಜ) ಜಿಲ್ಲೆಯ ಯಾಸೀನಪುರ ನಿವಾಸಿ ವಿಕಾಸ ಕುಮಾರ (೨೬) ಅವರು ಸೆಪ್ಟೆಂಬರ್ ೨೭ರಂದು ಸಂಜೆ ೬.೩೦ರ ಸುಮಾರಿಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ವಿಕಾಸ ಕುಮಾರ ಹಾಗೂ ಅವರೊಂದಿಗೆ ಕೆಲಸ ಮಾಡುತ್ತಿದ್ದ ಪ್ರಮೋದ ಕುಮಾರ ಅವರು ಸೆಪ್ಟೆಂಬರ್ ೨೫ರಂದು ಸಂಜೆ ಸುಮಾರು ೭.೩೦ರ ವೇಳೆಗೆ ಗೊರಟೆ ಕ್ರಾಸ್‌ಗೆ ಬಂದಿದ್ದರು. ರಸ್ತೆ ದಾಟಲು ಇಬ್ಬರೂ ಹೆದ್ದಾರಿಯ ಬದಿಯಲ್ಲಿ ನಿಂತಿದ್ದರು. ವಿಕಾಸ ಕುಮಾರ ರಸ್ತೆ ದಾಟಿ ಇನ್ನೊಂದು ಬದಿಗೆ ತೆರಳಿದ್ದು, ಪ್ರಮೋದ ಕುಮಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಗಮನಿಸಿಕೊಂಡು ನಿಧಾನವಾಗಿ ರಸ್ತೆ ದಾಟುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಭಟ್ಕಳದಿಂದ ಕುಂದಾಪುರದ ಕಡೆಗೆ ತೆರಳುತ್ತಿದ್ದ ಕೆಎ-೪೭/ವಿ-೦೯೪೭ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರ ಮುತಮ್ಮಿಮ್ ಅವರು ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಮೋದ ಕುಮಾರ ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಪ್ರಮೋದ ಕುಮಾರ ರಸ್ತೆಗೆ ಬಿದ್ದಿದ್ದು, ಎರಡೂ ಕಾಲುಗಳಿಗೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಮುತಮ್ಮಿಮ್ ಅವರಿಗೂ ಗಾಯಗಳಾಗಿವೆ ಎಂದು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಭಟ್ಕಳದಲ್ಲಿ ನಾಯಿ ಅಡ್ಡ ಬಂದು ಸ್ಕೂಟಿ ಅಪಘಾತ: ವ್ಯಕ್ತಿಗೆ ತೀವ್ರ ಗಾಯ
ಮುಟ್ಟಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ: ೮೦ ಮಂದಿ ಸ್ವಯಂಪ್ರೇರಿತ ರಕ್ತದಾನ
ಸೆ ೨೮ರಿಂದ ಬ್ಯಾಂಕ್‌ಗಳಿಗೆ ರಜೆ ಇಲ್ಲ: ಮೂರು ದಿನಗಳ ಮುಷ್ಕರ ಮುಂದೂಡಿಕೆ
ಸಂಪಾದಕೀಯ/ ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ: ಮುಂದಿನ ಹೆಜ್ಜೆ ಯಾವುದು?


