ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಮುಟ್ಟಳ್ಳಿಯಲ್ಲಿ ಶ್ರೀ ಕಟ್ಟೆವೀರ ಯುವಶಕ್ತಿ ಸಂಘ (ರಿ), ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ (ರಿ), ತಾಲೂಕು ಸಾರ್ವಜನಿಕ ಆಸ್ಪತ್ರೆ ಭಟ್ಕಳ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಮುಟ್ಟಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಭಾಂಗಣದಲ್ಲಿ ನಡೆದ ಶಿಬಿರವನ್ನು ನಿವೃತ್ತ ಶಿಕ್ಷಕ ಹಾಗೂ ಹಿರಿಯ ಮುಖಂಡ ಎಂ ಕೆ ನಾಯ್ಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂ ಕೆ ನಾಯ್ಕ, ರಕ್ತವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ. ಮಾನವ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅಗತ್ಯದ ಸಂದರ್ಭದಲ್ಲಿ ಒಬ್ಬರು ನೀಡುವ ರಕ್ತ ಮತ್ತೊಬ್ಬರ ಜೀವ ಉಳಿಸಬಲ್ಲದು. ಹೀಗಾಗಿ ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದೆ ಎಂದರು.
ರಕ್ತದಾನದ ಬಗ್ಗೆ ಸಕಾರಾತ್ಮಕ ಭಾವನೆ ಅಗತ್ಯ: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಫಿಜಿಷಿಯನ್ ಡಾ ಪ್ರಕಾಶ ವಿ ನಾಯ್ಕ ಮಾತನಾಡಿ, ರಕ್ತದಾನಕ್ಕೆ ಯಾವುದೇ ಸಂಬಂಧ, ಜಾತಿ, ಧರ್ಮ ಅಥವಾ ಭೇದಭಾವ ಅಡ್ಡಿಯಾಗಬಾರದು. ‘ರಕ್ತ ತೆಗೆಯುತ್ತಾರೆ’ ಎನ್ನುವ ಬದಲು ‘ರಕ್ತ ನೀಡುತ್ತಾರೆ’ ಎಂಬ ಸಕಾರಾತ್ಮಕ ಭಾವನೆ ಸಮಾಜದಲ್ಲಿ ಮೂಡಬೇಕು ಎಂದರು.
ನಿರಂತರವಾಗಿ ರಕ್ತದ ಅವಶ್ಯಕತೆ: ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಜನರಲ್ ಸರ್ಜನ್ ಡಾ ಅರುಣಕುಮಾರ್ ಎನ್ ಎ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಯುನಿಟ್ ರಕ್ತದಾನದಿಂದ ಅಗತ್ಯವಿರುವ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಿದೆ. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ರಕ್ತದ ಅವಶ್ಯಕತೆ ನಿರಂತರವಾಗಿರುತ್ತದೆ. ಹೀಗಾಗಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ರಕ್ತದಾನಕ್ಕೂ ಮುನ್ನ ನಡೆಯುವ ಆರೋಗ್ಯ ತಪಾಸಣೆಯಿಂದ ದಾನಿಗಳು ತಮ್ಮ ಆರೋಗ್ಯದ ಸ್ಥಿತಿಯ ಕುರಿತು ಅರಿವು ಪಡೆಯಲು ಸಾಧ್ಯವಾಗುತ್ತದೆ ಎಂದರು.
೮೦ ಮಂದಿ ರಕ್ತದಾನ:
ಶಿಬಿರದಲ್ಲಿ ಒಟ್ಟು ೮೦ ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಡಾ ಅರುಣಕುಮಾರ್ ಎನ್ ಎ ಹಾಗೂ ಡಾ ಪ್ರಕಾಶ ವಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ ರವಿ ನಾಯ್ಕ, ಕಟ್ಟೆವೀರ ಯುವಶಕ್ತಿ ಸಂಘದ ಅಧ್ಯಕ್ಷ ಚಂದ್ರು ಕುಪ್ಪಯ್ಯ ನಾಯ್ಕ, ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಹೇಶ ನರಸಿಂಹ ನಾಯ್ಕ, ಕಟ್ಟೆವೀರ ದೇವಸ್ಥಾನದ ಅಧ್ಯಕ್ಷ ನಾರಾಯಣ ನಾಯ್ಕ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ ಸ್ನೇಹಾ ಉಪಸ್ಥಿತರಿದ್ದರು. ಕಟ್ಟೆವೀರ ಯುವಶಕ್ತಿ ಸಂಘದ ಸದಸ್ಯ ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಎನ್ ಜಿ ಗೌಡ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ:
ಸೆ ೨೮ರಿಂದ ಬ್ಯಾಂಕ್ಗಳಿಗೆ ರಜೆ ಇಲ್ಲ: ಮೂರು ದಿನಗಳ ಮುಷ್ಕರ ಮುಂದೂಡಿಕೆ
ಸಂಪಾದಕೀಯ/ ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ: ಮುಂದಿನ ಹೆಜ್ಜೆ ಯಾವುದು?


