ಭಟ್ಕಳ ಡೈರಿ ವರದಿ
ಭಟ್ಕಳ: ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಕನಸು ಹೊತ್ತ ಉತ್ತರ ಕನ್ನಡ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಪ್ರಕಾಶ ನಾಯ್ಕ, ಸಂಸ್ಥೆಯ ಶೈಕ್ಷಣಿಕ ಸಾಧನೆ ಹಾಗೂ ಪ್ರಾಕ್ತನ ವಿದ್ಯಾರ್ಥಿಗಳೊಂದಿಗೆ ಬೆಸೆದುಕೊಂಡಿರುವ ಭಾವನಾತ್ಮಕ ಸಂಬಂಧವನ್ನು ಶ್ಲಾಘಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳ ಸಾಧನೆಯ ಹಿಂದೆ ಸಂಸ್ಥೆ ನೀಡುತ್ತಿರುವ ಮಾರ್ಗದರ್ಶನ ಮತ್ತು ಶೈಕ್ಷಣಿಕ ವಾತಾವರಣ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಕಾಲೇಜಿನ ಶೈಕ್ಷಣಿಕ ಸಲಹೆಗಾರ ಎಂ. ಕೆ. ನಾಯ್ಕ ಸಂಸ್ಥೆಯ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳಾದ ರವಿಕಿರಣ, ಪ್ರಸನ್ನ ನಾಯ್ಕ, ಡಾ. ಅನನ್ಯ ನಾಯ್ಕ ಹಾಗೂ ಡಾ. ಶ್ರೀರಾಮ ಮಹಾಲೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಿದ್ಧಾರ್ಥ ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷೆ ಹಾಗೂ ಪ್ರಾಚಾರ್ಯೆ ಅರ್ಚನಾ ಯು., ಸನ್ಮಾನಿತ ವಿದ್ಯಾರ್ಥಿಗಳ ಸಾಧನೆಯ ಹಿಂದೆ ಇರುವ ಪರಿಶ್ರಮವನ್ನು ಸ್ಮರಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅಭಿನಂದನೆ ಸಲ್ಲಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ MBBS ಪ್ರವೇಶ ಪಡೆದ ದೀಕ್ಷಿತ್ ಜಿ. ನಾಯ್ಕ, ಯಶ್ವಂತ ನಾಯ್ಕ, ಸಚಿನ್ ಎಚ್. ಎಸ್., ಕವನ ಗೌಡ ಹಾಗೂ ಆಕಾಶ ಎಸ್. ನಾಯ್ಕ ಅವರನ್ನು ಗೌರವಿಸಲಾಯಿತು. ಇದೇ ವೇಳೆ IITಗೆ ಪ್ರವೇಶ ಪಡೆದ ಹರ್ಷನ್ ಗೊಂಡ ಅವರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು.
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನೂ ಉಪನ್ಯಾಸಕರ ಸಹಕಾರದೊಂದಿಗೆ ಗೌರವಿಸಲಾಯಿತು. ಶೈಕ್ಷಣಿಕ ಸಂಯೋಜಕ ಡಾ. ರಾಜೀವ ನಾಯ್ಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪ್ರೀತಮ್, ಮಾನ್ಯ ಹಾಗೂ ಗೌತಮಿ ಕಾರ್ಯಕ್ರಮ ನಿರೂಪಿಸಿದರು. ಸುಗಮ ವಂದಿಸಿದರು.
ಇದನ್ನೂ ಓದಿ :
ನಿಚ್ಛಲಮಕ್ಕಿ ಗುರುಮಠಕ್ಕೆ ಹೊಸ ಸಾರಥ್ಯ: ನಾಮಧಾರಿ ಸಮಾಜದ ಅಧ್ಯಕ್ಷರಾಗಿ ನಾಗೇಂದ್ರ ನಾಯ್ಕ ಆಯ್ಕೆ
ಕಾಶಿಯ ಅನುಭವಕ್ಕೆ ಅಕ್ಷರ ರೂಪ: ೮ನೇ ತರಗತಿಯ ಮನಸ್ವಿ ಶೆಟ್ಟಿ ಪುಸ್ತಕ ಲೋಕಕ್ಕೆ




