ಭಟ್ಕಳ ಡೈರಿ ವರದಿ

ಭಟ್ಕಳ: ಮುರ್ಡೇಶ್ವರ ನಾಕಾ ದೇವಸ್ಥಾನ ರಸ್ತೆಯಲ್ಲಿ ಬೆಳಗಿನ ಜಾವ ಸಂಭವಿಸಿದ ಆಟೋ ರಿಕ್ಷಾ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ೭೦ ವರ್ಷದ ವೃದ್ಧೆ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಅಕ್ಟೋಬರ್ ೨೫ರಂದು ಬೆಳಿಗ್ಗೆ ಸುಮಾರು ೫ ಗಂಟೆ ವೇಳೆಗೆ ಮುರ್ಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ನಡೆದಿದೆ.

ದೂರಿನ ಪ್ರಕಾರ, ಮುರ್ಡೇಶ್ವರದ ಪಟ್ರಗದ್ದೆ ನಿವಾಸಿ ಹನುಮಂತ ವೆಂಕಟ್ರಮಣ ನಾಯ್ಕ ಅವರ ತಾಯಿ ದುರ್ಗಮ್ಮ ವೆಂಕಟ್ರಮಣ ನಾಯ್ಕ ಅವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮುರ್ಡೇಶ್ವರ ನಾಕಾ ಕಡೆಯಿಂದ ದೇವಸ್ಥಾನದ ಕಡೆಗೆ ಪ್ರಯಾಣಿಕ ಆಟೋ ರಿಕ್ಷಾ ಸಂಚರಿಸುತ್ತಿತ್ತು. ಕೆಎ-೪೭-ಎ-೦೦೩೦ ನೋಂದಣಿ ಸಂಖ್ಯೆಯ ಆಟೋವನ್ನು ಚಾಲಕ ಶೇಖರ ಮಂಜಪ್ಪ ನಾಯ್ಕ ಅವರು ದುಡುಕು ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ದುರ್ಗಮ್ಮ ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಡಿಕ್ಕಿಯ ಪರಿಣಾಮ ದುರ್ಗಮ್ಮ ಅವರ ಹಣೆಗೆ ಹಾಗೂ ಬಲ ಕೈಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಕುರಿತು ಹನುಮಂತ ನಾಯ್ಕ ಅವರು ಅಕ್ಟೋಬರ್ ೨೭ರಂದು ಮಧ್ಯಾಹ್ನ ಮುರ್ಡೇಶ್ವರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಆಟೋ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ :

ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ: ಮುರುಡೇಶ್ವರದಲ್ಲಿ ಜೀವ ರಕ್ಷಕರ ಸಮಯಪ್ರಜ್ಞೆ

ಭಟ್ಕಳ ಜಾಲಿ ಕ್ರಾಸ್ ಬಳಿ ಅಪಘಾತ: ಮಹಿಳೆ ಸಾವು