ಭಟ್ಕಳ ಡೈರಿ ವರದಿ

ಭಟ್ಕಳ: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ (ಎಸ್‌ಐಆರ್) ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಆಯಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗಿದೆ. ಭಟ್ಕಳ ವಿಧಾನಸಭಾ ಕ್ಷೇತ್ರದ ಮತದಾರರ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಹಳೆಯ ಪಟ್ಟಿಗೆ ಹೋಲಿಸಿದರೆ ಹೊಸ ಪಟ್ಟಿಯಲ್ಲಿ ಸುಮಾರು ೧೩ ಸಾವಿರ ಮತದಾರರ ಇಳಿಕೆ ದಾಖಲಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೨ ಲಕ್ಷ ೩೧ ಸಾವಿರ ಮತದಾರರಿದ್ದರು. ಇದೀಗ ಎಸ್‌ಐಆರ್ ಬಳಿಕ ಪ್ರಕಟವಾಗಿರುವ ಪಟ್ಟಿಯಲ್ಲಿ ಈ ಸಂಖ್ಯೆ ಸುಮಾರು ೨ ಲಕ್ಷ ೧೮ ಸಾವಿರಕ್ಕೆ ಇಳಿದಿದೆ ಎಂದು ಲಭ್ಯವಿರುವ ಅಂಕಿ-ಅಂಶಗಳು ಸೂಚಿಸುತ್ತವೆ.

ಇದರ ನಡುವೆ ಫಾರಂ–೬ ಮೂಲಕ ಸುಮಾರು ೫,೭೦೦ ಹೊಸ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಆದರೆ, ಮತ್ತೊಂದೆಡೆ ಸುಮಾರು ೧೯ ಸಾವಿರದಿಂದ ೨೦ ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅಂದಾಜಿಸಲಾಗಿದೆ. ಅಂದರೆ, ಹೊಸ ಮತದಾರರ ಸೇರ್ಪಡೆಯಾಗಿದ್ದರೂ, ಡಿಲೀಟ್ ಆಗಿರುವ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಒಟ್ಟಾರೆ ಮತದಾರರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.

ಸ್ಥಳೀಯ ರಾಜಕೀಯ ವಲಯದಲ್ಲಿ ಈ ಬದಲಾವಣೆ ಈಗ ಗಮನ ಸೆಳೆಯುತ್ತಿದ್ದು, ಮತದಾರರ ಹೆಸರುಗಳ ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ಪರಿಷ್ಕರಣೆಯ ವಿವರಗಳ ಕುರಿತು ಸಾರ್ವಜನಿಕರಲ್ಲಿ ಚರ್ಚೆ ಆರಂಭವಾಗಿದೆ. ಮತದಾರರು ತಮ್ಮ ಹೆಸರು ಹೊಸ ಪಟ್ಟಿಯಲ್ಲಿ ಮುಂದುವರಿದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ. ವಿಶೇಷವಾಗಿ ಹೆಸರು ಡಿಲೀಟ್ ಆಗಿರುವವರು ಅಥವಾ ವಿಳಾಸ, ವಯಸ್ಸು ಸೇರಿದಂತೆ ವಿವರಗಳಲ್ಲಿ ಬದಲಾವಣೆ ಇರುವವರು ಸಂಬಂಧಿಸಿದ ಚುನಾವಣಾ ಅಧಿಕಾರಿಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಮತದಾರರ ಪಟ್ಟಿಯಲ್ಲಿನ ಈ ಬದಲಾವಣೆ ಮುಂದಿನ ಚುನಾವಣಾ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಭಟ್ಕಳ ಕ್ಷೇತ್ರದಲ್ಲಿ ಎಸ್‌ಐಆರ್ ಬಳಿಕದ ಅಂತಿಮ ಅಂಕಿ-ಅಂಶಗಳತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.

ಇದನ್ನೂ ಓದಿ :

ಮುರ್ಡೇಶ್ವರದಲ್ಲಿ ಆಟೋ ಡಿಕ್ಕಿ: ೭೦ ವರ್ಷದ ವೃದ್ಧೆಗೆ ಗಾಯ, ಚಾಲಕನ ವಿರುದ್ಧ ದೂರು

ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ: ಮುರುಡೇಶ್ವರದಲ್ಲಿ ಜೀವ ರಕ್ಷಕರ ಸಮಯಪ್ರಜ್ಞೆ