ಭಟ್ಕಳ ಡೈರಿ ವರದಿ

ಮಂಕಿ: ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕುಳಿತುಕೊಂಡು ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಭಟ್ಕಳ ತಾಲೂಕಿನ ವ್ಯಕ್ತಿಯೊಬ್ಬರನ್ನು ಮಂಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಟ್ಕಳ ತಾಲೂಕಿನ ೩೫ ವರ್ಷದ ಸಂತೋಷ ವೆಂಕಟೇಶ ನಾಯ್ಕ ಬಂಧಿತ ಆರೋಪಿ. ಇವರು ವೃತ್ತಿಯಲ್ಲಿ ಚಾಲಕರಾಗಿದ್ದಾರೆ.

ಮಂಕಿ ರೈಲ್ವೆ ನಿಲ್ದಾಣಕ್ಕೆ ತೆರಳುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಸಿಮೆಂಟ್ ಕಟ್ಟೆಯ ಮೇಲೆ ಕುಳಿತುಕೊಂಡು, ರಸ್ತೆಯಲ್ಲಿ ಸಂಚರಿಸುವ ಜನರನ್ನು ಆಕರ್ಷಿಸಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಒಂದು ರೂಪಾಯಿಗೆ ೮೦ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ, ಸಾರ್ವಜನಿಕರಿಂದ ಮಟ್ಕಾ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಹಣ ಪಡೆದು ಮಟ್ಕಾ ಸಂಖ್ಯೆಗಳ ಚೀಟಿಯನ್ನು ಬರೆದುಕೊಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಆರೋಪಿಯಿಂದ ₹೮೧೦ ನಗದು, ಓಸಿ ಮಟ್ಕಾ ಸಂಖ್ಯೆಗಳಿರುವ ಒಂದು ಚೀಟಿ ಹಾಗೂ ಒಂದು ಬಾಲ್ ಪೆನ್ನನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ ೭೮(೩)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಮಂಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಶೈಲ ಡಿ. ಮುರಗೋಡ ಅವರು ಈ ಪ್ರಕರಣದ ಕುರಿತು ಕ್ರಮ ಕೈಗೊಂಡಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಗೇಟ್ ತೆರೆಯಲೂ ಅನುಮತಿ ಬೇಕಂತೆ! ಭಟ್ಕಳದಲ್ಲಿ ಜಾಗದ ವಿವಾದ ಪೊಲೀಸ್ ಠಾಣೆಗೆ

ಮಿಚಿಗನ್ ಸೆನೆಟ್ ಚುನಾವಣೆ ಮೇಲೆ ಭಟ್ಕಳದ ಕಣ್ಣು: ಅಭ್ಯರ್ಥಿ ಪತ್ನಿಯ ತವರೂರು ಇಲ್ಲೇ!