ಭಟ್ಕಳ ಡೈರಿ ವಿಶೇಷ ವರದಿ
ಭಟ್ಕಳ: ಇಲ್ಲಿಂದ ಸುಮಾರು ಸಾವಿರಾರು ಕಿಲೋಮೀಟರ್ ದೂರದ ಅಮೆರಿಕದ ರಾಜಕೀಯ ಅಂಗಳದಲ್ಲಿ ನಡೆಯುತ್ತಿರುವ ಚುನಾವಣೆಯೊಂದು ಇದೀಗ ಕರಾವಳಿ ಕರ್ನಾಟಕದ ಗಮನ ಸೆಳೆದಿದೆ. ಅಮೆರಿಕದ ಮಿಚಿಗನ್ ರಾಜ್ಯದ ಸೆನೆಟ್ ಚುನಾವಣೆಯ ಪ್ರಮುಖ ಅಭ್ಯರ್ಥಿಯಾಗಿರುವ ಅಬ್ದುಲ್ ಎಲ್-ಸಯ್ಯದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರಿಗೆ ಭಟ್ಕಳದ ನಂಟಿರುವುದೇ ಇದಕ್ಕೆ ಕಾರಣ.
ಅಮೆರಿಕದ ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ ಮಿಚಿಗನ್ ರಾಜ್ಯದ ಸೆನೆಟ್ ಕಣ ಸಾಕಷ್ಟು ಕುತೂಹಲ ಮೂಡಿಸಿದೆ. ಡೆಮಾಕ್ರಟಿಕ್ ಪಕ್ಷದ ೪೨ ವರ್ಷದ ಅಬ್ದುಲ್ ಎಲ್-ಸಯ್ಯದ್ ಮತ್ತು ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ನಡುವಿನ ಸ್ಪರ್ಧೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಈ ಪೈಕಿ ಅಬ್ದುಲ್ ಎಲ್-ಸಯ್ಯದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರು ಭಟ್ಕಳ ಮೂಲದ ಕುಟುಂಬಕ್ಕೆ ಸೇರಿದವರು ಎಂಬುದು ಕರಾವಳಿ ಭಾಗದ ಜನರಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ.
ಭಟ್ಕಳದ ಅಭಿವೃದ್ಧಿಗೆ ಕೊಡುಗೆ ನೀಡಿದ್ದ ಜುಕಾಕು ಶಮ್ಸುದ್ದೀನ್: ಡಾ. ಸಾರಾ ಅವರ ತಾತ ಜುಕಾಕು ಶಮ್ಸುದ್ದೀನ್ ಅವರು ಮೈಸೂರು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರ ಆಡಳಿತಾವಧಿಯಲ್ಲಿ ಹಣಕಾಸು ಖಾತೆಯ ಉಪ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಭಟ್ಕಳದ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ನೀಡಿದ್ದರು. ಪಟ್ಟಣಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಈ ಭಾಗದ ಮೊದಲ ವಕೀಲರಾಗಿಯೂ ಗುರುತಿಸಿಕೊಂಡಿದ್ದರು. ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲ ಸಮುದಾಯದ ಜನರು ತಮ್ಮ ಕಾನೂನು ಸಮಸ್ಯೆ ಹಾಗೂ ಇತರ ವಿಚಾರಗಳಿಗಾಗಿ ಅವರ ಬಳಿ ಬರುತ್ತಿದ್ದರು ಎಂದು ಕುಟುಂಬದ ಸದಸ್ಯರು ಸ್ಮರಿಸಿದ್ದಾರೆ.
ಶಮ್ಸುದ್ದೀನ್ ಅವರಿಗೆ ನಾಲ್ವರು ಪುತ್ರರು ಸೇರಿದಂತೆ ಒಟ್ಟು ಹತ್ತು ಮಕ್ಕಳಿದ್ದರು. ಅವರ ಪುತ್ರ ಡಾ. ತಯೇಬ್ ಜುಕಾಕು ಬೆಂಗಳೂರಿನಲ್ಲಿ ವೈದ್ಯಕೀಯ ಪದವಿ (ಎಂಬಿಬಿಎಸ್) ಪೂರ್ಣಗೊಳಿಸಿ ಬಳಿಕ ಅಮೆರಿಕಕ್ಕೆ ತೆರಳಿದ್ದರು. ಡಾ. ಸಾರಾ ಇವರ ಪುತ್ರಿ.
ಅಮೆರಿಕದಲ್ಲಿದ್ದರೂ ಭಟ್ಕಳದ ನಂಟು ಉಳಿಸಿಕೊಂಡ ಕುಟುಂಬ: ಅಮೆರಿಕದಲ್ಲಿ ಬೆಳೆದ ತಮ್ಮ ಮಕ್ಕಳಿಗೆ ಕುಟುಂಬದ ಮೂಲ ನೆಲೆಯ ಪರಿಚಯ ಇರಬೇಕೆಂಬ ಉದ್ದೇಶದಿಂದ ಡಾ. ತಯೇಬ್ ಅವರು ಮಕ್ಕಳನ್ನು ಆಗಾಗ್ಗೆ ಬೆಂಗಳೂರು ಹಾಗೂ ಭಟ್ಕಳಕ್ಕೆ ಕರೆತರುತ್ತಿದ್ದರು. ಇದರಿಂದಾಗಿ ವಿದೇಶದಲ್ಲಿ ನೆಲೆಸಿದ್ದರೂ ಕುಟುಂಬದ ಸದಸ್ಯರು ತಮ್ಮ ತವರೂರಿನೊಂದಿಗಿನ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಕುಟುಂಬದ ಬಹುತೇಕ ಸದಸ್ಯರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರೆ, ಡಾ. ಸಾರಾ ಅವರ ನಿಕಟ ಕುಟುಂಬ ಅಮೆರಿಕದಲ್ಲಿದೆ.
ವೈದ್ಯಕೀಯ ಹಿನ್ನೆಲೆಯ ಕುಟುಂಬ: ಜುಕಾಕು ಕುಟುಂಬದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಬ್ದುಲ್ ಎಲ್-ಸಯ್ಯದ್ ಅವರೂ ವೈದ್ಯಕೀಯ ಪದವೀಧರರಾಗಿದ್ದು, ಅಮೆರಿಕದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ದೊರೆಯುವ ಉದ್ದೇಶದ ‘ಮೆಡಿಕೇರ್ ಫಾರ್ ಆಲ್’ ಯೋಜನೆಯನ್ನು ತಮ್ಮ ಪ್ರಮುಖ ಚುನಾವಣಾ ಆಶ್ವಾಸನೆಗಳಲ್ಲಿ ಒಂದಾಗಿ ಮುಂದಿಟ್ಟಿದ್ದಾರೆ. ಈ ಯೋಜನೆಯಡಿ ಖಾಸಗಿ ವಿಮಾ ವ್ಯವಸ್ಥೆ ಮುಂದುವರಿಯಲು ಅವಕಾಶವಿದ್ದರೂ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಗೊಂಡರೆ ಖಾಸಗಿ ವಿಮೆಯ ಅಗತ್ಯ ಕಡಿಮೆಯಾಗಲಿದೆ ಎಂಬುದು ಅವರ ನಿಲುವು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಈಜಿಪ್ಟ್ ಮೂಲದ ಅಬ್ದುಲ್ ಎಲ್-ಸಯ್ಯದ್ ಅವರು ಅಮೆರಿಕದ ಸೆನೆಟ್ ಪ್ರವೇಶಿಸುವ ಮೊದಲ ಮುಸ್ಲಿಂ ಸದಸ್ಯರಾಗುವ ಸಾಧ್ಯತೆಯಿದೆ.
ದಕ್ಷಿಣ ಭಾರತದ ಸಂಸ್ಕೃತಿಯೊಂದಿಗೂ ಆತ್ಮೀಯ ನಂಟು: ರೋಡ್ಸ್ ಸ್ಕಾಲರ್ ಆಗಿರುವ ಅಬ್ದುಲ್ ಎಲ್-ಸಯ್ಯದ್ ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಸಾರಾ ಅವರನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರೂ ವಿವಾಹವಾಗಿದ್ದರು. ದಕ್ಷಿಣ ಭಾರತೀಯ ಕುಟುಂಬದೊಂದಿಗೆ ಕಳೆದ ಸುಮಾರು ಇಪ್ಪತ್ತು ವರ್ಷಗಳ ವೈವಾಹಿಕ ಜೀವನ ತಮ್ಮನ್ನು ಭಾರತೀಯ ಸಂಸ್ಕೃತಿಗೆ ಮತ್ತಷ್ಟು ಹತ್ತಿರವಾಗಿಸಿದೆ ಎಂದು ಎಲ್-ಸಯ್ಯದ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಸಾರಾ ಅವರ ಕುಟುಂಬದೊಂದಿಗೆ ಎಲ್-ಸಯ್ಯದ್ ಅವರ ಕುಟುಂಬದ ಮೌಲ್ಯಗಳಲ್ಲಿಯೂ ಸಾಮ್ಯತೆ ಇದೆ. ವಿಶೇಷವಾಗಿ ಪ್ರಾಮಾಣಿಕತೆ ಮತ್ತು ಜನಸೇವೆಯ ಮನೋಭಾವ ತಮ್ಮ ತಾತನ ಆದರ್ಶಗಳಾಗಿದ್ದವು ಎಂದು ಸಾರಾ ಅವರ ಸಂಬಂಧಿಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಚುನಾವಣಾ ರಾಜಕೀಯದಲ್ಲಿ ಸಾರಾ ಮತ್ತು ಅವರ ಪತಿ ಗಮನ ಸೆಳೆಯುತ್ತಿರುವುದಕ್ಕೆ ಕುಟುಂಬದ ಸದಸ್ಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರು ವಾಟ್ಸ್ಆ್ಯಪ್ ಗುಂಪಿನ ಮೂಲಕವೂ ಚುನಾವಣೆಯ ಬೆಳವಣಿಗೆಗಳನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಅಬ್ದುಲ್ ಎಲ್-ಸಯ್ಯದ್ ಅವರ ಚುನಾವಣಾ ಆರ್ಥಿಕ ವಿವರಗಳಲ್ಲಿಯೂ ಬೆಂಗಳೂರಿನಲ್ಲಿರುವ ಸಾರಾ ಅವರ ಹೆಸರಿನ ಆಸ್ತಿಯ ಉಲ್ಲೇಖವಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
“ಪದಕ ಗೆದ್ದವರು ವಿದ್ಯಾರ್ಥಿಗಳು; ಅದರ ಹಿಂದೆ ಬೆವರಿತ್ತು ಈ ಗುರುದೇವರದ್ದು!”
ಬೆಂಗಳೂರು–ಗೋವಾ ವಂದೇ ಭಾರತ್ ರೈಲು: ಭಟ್ಕಳ–ಮುರುಡೇಶ್ವರ ಸೇರಿ ಕರಾವಳಿಗೆ ನೇರ ಸಂಪರ್ಕ



