ಭಟ್ಕಳ ಡೈರಿ ವರದಿ
ಭಟ್ಕಳ: ಖರೀದಿಸಿದ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ಕತ್ತಿ ಹಿಡಿದು ಜೀವ ಬೆದರಿಕೆ ಹಾಕಿ, ಕಾಮಗಾರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಮಣ್ಕುಳಿಯಲ್ಲಿ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಭಟ್ಕಳದ ಪೂಜಾ ನಿಲಯ ನಿವಾಸಿ, ವೃತ್ತಿಯಲ್ಲಿ ವಕೀಲರಾಗಿರುವ ಮಂಜುನಾಥ ಹೊನ್ನಪ್ಪ ನಾಯ್ಕ (೪೩) ಅವರು ಗಣಪತಿ ಮಾದೇವ ನಾಯ್ಕ (೪೫) ಹಾಗೂ ಈಶ್ವರ ಮಾದೇವ ನಾಯ್ಕ (೪೩) ಎಂಬುವವರ ವಿರುದ್ಧ ಆರೋಪ ಮಾಡಿದ್ದಾರೆ.
ದೂರಿನ ಪ್ರಕಾರ, ಮಂಜುನಾಥ ನಾಯ್ಕ ಅವರು ೨೦೨೩ರ ಜನವರಿ ೧೮ರಂದು ಮಣ್ಕುಳಿಯಲ್ಲಿ ಒಂದು ಗುಂಟೆ ಜಾಗವನ್ನು ಖರೀದಿಸಿದ್ದರು. ಅಂದಿನಿಂದಲೇ ಆರೋಪಿಗಳು ಈ ಜಾಗ ತಮ್ಮದು ಎಂದು ಹೇಳುತ್ತಾ, ಅಲ್ಲಿ ಮನೆ ನಿರ್ಮಿಸದಂತೆ ಹಾಗೂ ಓಡಾಡಲು ರಸ್ತೆ ಬಿಡುವುದಿಲ್ಲವೆಂದು ಪದೇಪದೇ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಈ ನಡುವೆ ೨೦೨೬ರ ನವೆಂಬರ್ ೧ರಂದು ಬೆಳಿಗ್ಗೆ ಸುಮಾರು ೯ ಗಂಟೆಗೆ ಮಂಜುನಾಥ ನಾಯ್ಕ ಅವರ ಮನೆಯ ಸೆಂಟ್ರಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ ಯುವಕನಿಗೆ ಗಣಪತಿ ನಾಯ್ಕ ಅವರು, ಇದು ನಮ್ಮ ಆಸ್ತಿ. ಇಲ್ಲಿ ವಾಹನ ನಿಲ್ಲಿಸುವುದು ಅಥವಾ ಕೆಲಸ ಮಾಡುವುದು ಕಂಡುಬಂದರೆ ಕತ್ತಿಯಿಂದ ಕೊಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಷಯ ತಿಳಿದು ಬೆಳಿಗ್ಗೆ ೯.೧೦ರ ಸುಮಾರಿಗೆ ಮಂಜುನಾಥ ನಾಯ್ಕ ಅವರು ಸ್ಥಳಕ್ಕೆ ತೆರಳಿದಾಗ, ಜಾಗಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ಸ್ಟೀಲ್ ತಗಡನ್ನು ಹಾಕಿರುವುದು ಕಂಡುಬಂದಿದೆ. ಅಲ್ಲಿದ್ದ ಗಣಪತಿ ನಾಯ್ಕ ಅವರು, ಗೇಟ್ ತೆರೆಯಬೇಕಾದರೆ ತನ್ನ ಅನುಮತಿ ಪಡೆದು ಒಳಗೆ ಬರಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಾಗ ಗಣಪತಿ ನಾಯ್ಕ ಅವರು ಮನೆಯೊಳಗೆ ಹೋಗಿ ಈಶ್ವರ ನಾಯ್ಕ ಅವರನ್ನು ಕರೆದುಕೊಂಡು ಎರಡು ಕತ್ತಿಗಳೊಂದಿಗೆ ಹೊರಬಂದಿದ್ದಾರೆ. ಮನೆ ಕಟ್ಟಲು ಬಿಡುವುದಿಲ್ಲ, ಈ ಜಾಗವನ್ನು ತಾನು ಕಡಿಮೆ ಬೆಲೆಗೆ ಖರೀದಿಸಲು ಉದ್ದೇಶಿಸಿದ್ದೆ, ಆದರೆ ದೂರುದಾರರು ಹೆಚ್ಚು ಬೆಲೆ ಕೊಟ್ಟು ಖರೀದಿಸಿದ್ದಾರೆ ಎಂದು ಹೇಳಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಅಸಭ್ಯವಾಗಿ ಬೈದು, ಇಲ್ಲಿ ಮನೆ ಕಟ್ಟಿದರೆ ಇವತ್ತಲ್ಲ ನಾಳೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಂಜುನಾಥ ನಾಯ್ಕ ಆರೋಪಿಸಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ



