ಭಟ್ಕಳ ಡೈರಿ ವರದಿ

ಭಟ್ಕಳ: ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಸಾಹಿತ್ಯದ ಸೊಗಡು ತುಂಬಿದ ಕಾರ್ಯಕ್ರಮವೊಂದು ಭಟ್ಕಳದ ಚಿತ್ರಾಪುರದಲ್ಲಿ ನಡೆಯಿತು. ಸಾಹಿತಿ ಶ್ರೀಧರ ಶೇಟ ಅವರ ನಿವಾಸ ‘ಕಲಾಸಿರಿ’ಯಲ್ಲಿ ನಡೆದ ಡಾ. ಆರ್.ವಿ. ಸರಾಫ್ ಸ್ಮರಣೆ, ಕಲಾಸಿರಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಕಾವ್ಯೋತ್ಸವ ಕಾರ್ಯಕ್ರಮವು ಸಾಹಿತ್ಯಾಸಕ್ತರ ಸಮಾಗಮಕ್ಕೆ ಸಾಕ್ಷಿಯಾಯಿತು.

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿರಾಲಿ ಚಿತ್ರಾಪುರದ ಕಲಾಸಿರಿ ಪ್ರತಿಷ್ಠಾನದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ’ ಕಾರ್ಯಕ್ರಮದಡಿ ಈ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಾಹಿತಿ ನಾರಾಯಣ ಯಾಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾಸಿರಿ ಪ್ರತಿಷ್ಠಾನವು ತನ್ನ ಮನೆಯಂಗಳದಲ್ಲೇ ಕಾವ್ಯೋತ್ಸವ ಆಯೋಜಿಸುವುದರ ಜತೆಗೆ ಸಾಹಿತ್ಯ ಮತ್ತು ಕಲಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ರೀಧರ ಶೇಟ ಕುಟುಂಬದ ಸಾಹಿತ್ಯ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಈ ಬಾರಿಯ ಕಲಾಸಿರಿ ಪ್ರಶಸ್ತಿಯನ್ನು ಶಿಕ್ಷಣ ತಜ್ಞ ಹಾಗೂ ಸಾಹಿತ್ಯ-ಕಲಾ ಪೋಷಕ ಡಾ. ಆರ್. ನರಸಿಂಹ ಮೂರ್ತಿ ಅವರಿಗೆ ನೀಡಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ. ತಮ್ಮ ಸಾಹಿತ್ಯ ಪಯಣದಲ್ಲಿ ನೆರವಾದವರನ್ನು ಸ್ಮರಿಸಿ ಗೌರವಿಸುವುದು ಹಾಗೂ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ಕಾವ್ಯೋತ್ಸವ ಆಯೋಜಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಡಾ. ಆರ್. ನರಸಿಂಹ ಮೂರ್ತಿಗೆ ಕಲಾಸಿರಿ ಪ್ರಶಸ್ತಿ: ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ೨೦೨೬ನೇ ಸಾಲಿನ ‘ಕಲಾಸಿರಿ ಪ್ರಶಸ್ತಿ’ಯನ್ನು ಶಿಕ್ಷಣ ತಜ್ಞ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಆರ್. ನರಸಿಂಹ ಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ತರಗತಿಯ ಪಾಠಕ್ಕೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳ ಜ್ಞಾನ ವಿಸ್ತಾರಕ್ಕೂ ನೆರವಾಗಬೇಕು. ಅವರ ಕುತೂಹಲವನ್ನು ತಾಳ್ಮೆಯಿಂದ ಪರಿಹರಿಸುವುದರ ಜತೆಗೆ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕಾವ್ಯೋತ್ಸವದಲ್ಲಿ ಕವಿತೆಗಳ ಕಲರವ: ಕಾರ್ಯಕ್ರಮದ ಅಂಗವಾಗಿ ನಡೆದ ಕನ್ನಡ ಕಾವ್ಯೋತ್ಸವದಲ್ಲಿ ಭಟ್ಕಳ ಸೇರಿದಂತೆ ವಿವಿಧ ಭಾಗಗಳ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಸಾಹಿತ್ಯಾಸಕ್ತರ ಗಮನ ಸೆಳೆದರು. ಎಂ.ಡಿ. ಪಕ್ಕಿ, ಕೃಷ್ಣ ಮೊಗೇರ ಅಳ್ವೆಕೋಡಿ, ಸುರೇಶ ಮುರ್ಡೇಶ್ವರ, ಜಯಶ್ರೀ ಆಚಾರಿ, ಸುಧಾ ಭಟ್, ಸುಮಲತಾ ನಾಯ್ಕ, ರಾಘವೇಂದ್ರ ಮಡಿವಾಳ, ಹೇಮಲತಾ ಶ್ರೀಧರ, ಕೆ.ಎಲ್. ಶಾನಭಾಗ, ನಂದನ ನಾಯ್ಕ, ರಾಜೀವಿ ಮೊಗೇರ, ಶಂಕರ ನಾಯ್ಕ, ನಾಗರತ್ನ ನಾಯ್ಕ ಹಾಗೂ ತೇಜ ಮೊಗೇರ ಸೇರಿದಂತೆ ಹಲವು ಕವಿಗಳು ಕಾವ್ಯ ವಾಚನದಲ್ಲಿ ಪಾಲ್ಗೊಂಡರು.

ಡಾ. ಆರ್.ವಿ. ಸರಾಫ್ ಸ್ಮರಣೆ:

ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿ ಹಾಗೂ ಜನಪ್ರಿಯ ವೈದ್ಯರಾಗಿದ್ದ ಡಾ. ಆರ್.ವಿ. ಸರಾಫ ಅವರನ್ನು ಸ್ಮರಿಸಿ ಮೌನಾಚರಣೆ ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಶಿರಾಲಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ಸಾಹಿತಿ ಮಾನಾಸುತ ಶಂಭು ಹೆಗಡೆ, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ, ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ಬಿ. ಮಡಿವಾಳ ಹಾಗೂ ಉಳ್ಮಣ್ಣು ಶಾಲೆಯ ಮುಖ್ಯಾಧ್ಯಾಪಕ ಡಿ.ಐ. ಮೊಗೇರ ಅವರು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಸಾಪ ಗೌರವ ಕೋಶಾಧ್ಯಕ್ಷ ಹಾಗೂ ಕಲಾಸಿರಿ ಪ್ರತಿಷ್ಠಾನದ ಸಂಚಾಲಕ ಸಾಹಿತಿ ಶ್ರೀಧರ ಶೇಟ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಹೇಮಲತಾ ಶ್ರೀಧರ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಪೂರ್ಣಿಮಾ ಕರ್ಕಿಕರ, ವಿನಾಯಕ ಅವಧಾನಿ, ಗಜಾನನ ಹೆಗಡೆ, ತಿಮ್ಮಪ್ಪ ದೇವಾಡಿಗ, ಗಣೇಶ ಗೌಡ, ನಾರಾಯಣ ದೇವಾಡಿಗ, ರಾಜೇಶ ನಾಯ್ಕ, ವೆಂಕಟೇಶ ಕೊಡಿಹಿತ್ತಲು, ನಾರಾಯಣ ಮೊಗೇರ, ವಿನಾಯಕ ಚಿತ್ರಾಪುರ, ಡಾ. ಶ್ರೇಯಾಂಕ, ಶ್ರೀಶಾ, ಪ್ರಣತಿ, ಲಕ್ಷ್ಮೀ, ಶೀತಲಾ ಚಿತ್ರಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಗಾಯಗೊಂಡ ಗೋವಿಗೆ ಭಟ್ಕಳದಲ್ಲಿ ಸಿಗದ ಚಿಕಿತ್ಸೆ: ಬೈಂದೂರಿನಿಂದ ಧಾವಿಸಿ ಬಂದ ಪಶುವೈದ್ಯರು!

ಜಿಲ್ಲಾಧಿಕಾರಿ ಎದುರೇ ಸಮಸ್ಯೆ ಹೇಳಿಕೊಳ್ಳಲು ಅವಕಾಶ; ಬೆಳಕೆಯಲ್ಲಿ ನ. ೧೪ರಂದು ಸಭೆ