ಭಟ್ಕಳ ಡೈರಿ ವರದಿ
ಭಟ್ಕಳ: ಸಾರ್ವಜನಿಕ ಸೇವೆಯಲ್ಲಿ ಮಾನವೀಯತೆ ಮತ್ತು ಕರ್ತವ್ಯನಿಷ್ಠೆ ಎಷ್ಟು ಮುಖ್ಯ ಎಂಬುದಕ್ಕೆ ಭಟ್ಕಳದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಹಲವು ವರ್ಷಗಳಿಂದ ಗಾಯಗೊಂಡು, ಇದೀಗ ಕಾಲಿನ ಗಾಯದಲ್ಲಿ ಹುಳುಗಳಾಗಿ ತೀವ್ರ ನೋವಿನಿಂದ ಬಳಲುತ್ತಿದ್ದ ಗೋವಿಗೆ ಭಟ್ಕಳದಲ್ಲಿ ತಕ್ಷಣ ಚಿಕಿತ್ಸೆ ದೊರೆಯದಿದ್ದಾಗ, ಪಕ್ಕದ ಬೈಂದೂರಿನ ಪಶುವೈದ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಭಟ್ಕಳ ಬಸ್ ನಿಲ್ದಾಣದ ಪರಿಸರದಲ್ಲಿ ಹಲವು ವರ್ಷಗಳಿಂದ ಗಾಯಗೊಂಡಿದ್ದ ಗೋವೊಂದು ಇತ್ತೀಚಿನ ದಿನಗಳಲ್ಲಿ ಕಾಲಿನ ಗಾಯ ಉಲ್ಬಣಗೊಂಡು, ಗಾಯದಲ್ಲಿ ಹುಳುಗಳು ಕಾಣಿಸಿಕೊಂಡ ಸ್ಥಿತಿಯಲ್ಲಿ ನೋವಿನಿಂದ ಅಲೆದಾಡುತ್ತಿತ್ತು. ಇದನ್ನು ಗಮನಿಸಿದ ಬಸ್ ನಿಲ್ದಾಣದ ಅಂಗಡಿ ಮಾಲೀಕ ಮಾರುತಿ ಪಾವಸ್ಕರ್ ಹಾಗೂ ವೆಂಕಟೇಶ್ವರ ಸ್ವೀಟ್ ಮಾಲೀಕರು ಗೋವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಾಲಿನ ಗಾಯದಲ್ಲಿ ಹುಳುಗಳಾಗಿರುವುದು ಕಂಡುಬಂದಿದೆ. ತಕ್ಷಣವೇ ಗೋವಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಭಟ್ಕಳ ಪಶು ಆಸ್ಪತ್ರೆ ಹಾಗೂ ತುರ್ತು ಪಶುವೈದ್ಯಕೀಯ ಸೇವೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಲಾಗಿದೆ. ಆದರೆ ಕರೆ ಸ್ವೀಕರಿಸದ ಕಾರಣ ಚಿಕಿತ್ಸೆ ವ್ಯವಸ್ಥೆ ಮಾಡುವಲ್ಲಿ ತೊಂದರೆ ಎದುರಾಗಿದೆ ಎನ್ನಲಾಗಿದೆ.
ಬಳಿಕ ಮಾರುತಿ ಪಾವಸ್ಕರ್ ಅವರು ಬೈಂದೂರು ಪಶು ಆಸ್ಪತ್ರೆಗೆ ಸಂಪರ್ಕಿಸಿದ್ದಾರೆ. ಅಲ್ಲಿನ ಪಶುವೈದ್ಯರು ತಕ್ಷಣ ಸ್ಪಂದಿಸಿ ಭಟ್ಕಳಕ್ಕೆ ಆಗಮಿಸಿ ಗಾಯಗೊಂಡ ಗೋವಿಗೆ ಅಗತ್ಯ ತುರ್ತು ಚಿಕಿತ್ಸೆ ನೀಡಿದ್ದಾರೆ.
ಬೈಂದೂರಿನಿಂದ ಬಂತು ತಕ್ಷಣದ ಸ್ಪಂದನೆ:
ಭಟ್ಕಳದ ಗೋವಿಗೆ ಚಿಕಿತ್ಸೆ ನೀಡಲು ಪಕ್ಕದ ಬೈಂದೂರಿನಿಂದ ಪಶುವೈದ್ಯಾಧಿಕಾರಿ ಆಗಮಿಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ದೂರದ ಊರಿನಿಂದಲೂ ತುರ್ತು ಕರೆಗೆ ಸ್ಪಂದಿಸಿ ಪ್ರಾಣಿಯ ನೋವು ನಿವಾರಿಸಲು ಮುಂದಾಗಿರುವ ಅವರ ಕರ್ತವ್ಯನಿಷ್ಠೆ ಮತ್ತು ಪ್ರಾಣಿ ಪ್ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೊಂದೆಡೆ, ಭಟ್ಕಳದ ಪಶು ಆಸ್ಪತ್ರೆಯನ್ನು ತುರ್ತು ಸಂದರ್ಭದಲ್ಲಿ ಸಂಪರ್ಕಿಸಿದಾಗ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ತುರ್ತು ಸಂಖ್ಯೆಗೆ ಕರೆ ಮಾಡಿದರೆ ಅಲ್ಲಿಂದಲೇ ಸಿಬ್ಬಂದಿ ಬರುತ್ತಾರೆ ಎಂಬ ಉತ್ತರ ನೀಡಲಾಗುತ್ತದೆ ಎಂಬುದು ಸ್ಥಳೀಯರ ಅಸಮಾಧಾನವಾಗಿದೆ.
ತುರ್ತು ಸಂದರ್ಭಗಳಲ್ಲಿ ಗಾಯಗೊಂಡ ಪ್ರಾಣಿಗಳಿಗೆ ತಕ್ಷಣ ಚಿಕಿತ್ಸೆ ಒದಗಿಸುವುದು ಪಶುವೈದ್ಯಕೀಯ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ಪ್ರಾಣಿಗಳು ತಮ್ಮ ನೋವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅವುಗಳ ಸ್ಥಿತಿಯನ್ನು ಗುರುತಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಇಲಾಖೆಯ ಕರ್ತವ್ಯವಾಗಿದೆ. ಈ ಘಟನೆಯನ್ನು ಭಟ್ಕಳದ ಪಶುವೈದ್ಯಕೀಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ. ಸಾರ್ವಜನಿಕರ ತುರ್ತು ಕರೆಗಳಿಗೆ ಸ್ಪಂದಿಸಿ, ಗಾಯಗೊಂಡ ಪ್ರಾಣಿಗಳಿಗೆ ವಿಳಂಬವಿಲ್ಲದೆ ಚಿಕಿತ್ಸೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹರೀಶ ಜಾಲಿ ಒತ್ತಾಯಿಸಿದ್ದಾರೆ.
ಒಂದೆಡೆ ಭಟ್ಕಳದಲ್ಲಿ ಸ್ಪಂದನೆಯ ಕೊರತೆಯ ಆರೋಪ, ಮತ್ತೊಂದೆಡೆ ಬೈಂದೂರಿನ ಪಶುವೈದ್ಯಾಧಿಕಾರಿಯ ಸಮಯೋಚಿತ ಸೇವೆ. ಈ ಘಟನೆ ಸರ್ಕಾರಿ ಸೇವೆಯಲ್ಲಿ ಮಾನವೀಯ ಕಾಳಜಿ ಮತ್ತು ಕರ್ತವ್ಯಪ್ರಜ್ಞೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಜಿಲ್ಲಾಧಿಕಾರಿ ಎದುರೇ ಸಮಸ್ಯೆ ಹೇಳಿಕೊಳ್ಳಲು ಅವಕಾಶ; ಬೆಳಕೆಯಲ್ಲಿ ನ. ೧೪ರಂದು ಸಭೆ
ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಜಿ.ಯು. ಭಟ್ಟರಿಗೆ ಗೌರವ ಸನ್ಮಾನ


