ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಬೈಪಾಸ್ ಬ್ರಿಡ್ಜ್ ಸಮೀಪ ಹ್ಯುಂಡೈ ವೆನ್ಯೂ ಕಾರು ಹಾಗೂ ಮಹೀಂದ್ರಾ ಬೊಲೆರೊ ಪಿಕಪ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಅಪಘಾತದಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಏರ್‌ಬ್ಯಾಗ್ ತೆರೆದುಕೊಂಡ ಪರಿಣಾಮ ಕಾರಿನಲ್ಲಿದ್ದವರು ಸಂಭವನೀಯ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.

ಕೇರಳ ಮೂಲದ ಮಿಸ್ರಿಯಾ ಅವರು ಚಲಾಯಿಸುತ್ತಿದ್ದ ಹ್ಯುಂಡೈ ವೆನ್ಯೂ ಕಾರು (ಕೆಎಲ್-೧೪-ಎಬಿ-೧೪೪೭) ಕುಂದಾಪುರ ಕಡೆಯಿಂದ ಭಟ್ಕಳದತ್ತ ಬರುತ್ತಿತ್ತು. ಈ ವೇಳೆ ಮುಟ್ಟಳ್ಳಿ ಬೈಪಾಸ್ ಸೇತುವೆ ಸಮೀಪ ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಎದುರಿನಿಂದ ಬರುತ್ತಿದ್ದ ಮಹೀಂದ್ರಾ ಬೊಲೆರೊ ಪಿಕಪ್ (ಕೆಎ-೪೭/ಎ-೬೦೪೬)ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಿಕಪ್ ವಾಹನವನ್ನು ಶಿರಾಲಿ ಶಾರದಾ ಹೊಳೆ ನಿವಾಸಿ ರವೀಂದ್ರ ಮಂಜಪ್ಪ ನಾಯ್ಕ (೪೩) ಚಲಾಯಿಸುತ್ತಿದ್ದರು. ಡಿಕ್ಕಿಯ ಪರಿಣಾಮ ಪಿಕಪ್ ಚಾಲಕ ರವೀಂದ್ರ ನಾಯ್ಕ ಹಾಗೂ ಸಹಪ್ರಯಾಣಿಕ ಸುಬ್ರಾಯ ಕೃಷ್ಣ ಮೊಗೇರ ಗಾಯಗೊಂಡಿದ್ದಾರೆ. ಇನ್ನು ಕಾರಿನಲ್ಲಿದ್ದ ಕೇರಳ ಮೂಲದ ಫಾತಿಮಾ ಮರ್ವಾ, ಫಾತಿಮಾ ಎ.ಎ., ಅಫ್ರಾ, ಆಫ್ರಿದ್ ಮತ್ತು ರಿಮ್ಸಾ ಅವರಿಗೂ ಗಾಯಗಳಾಗಿವೆ. ಒಟ್ಟು ಏಳು ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಾಯಗಳ ತೀವ್ರತೆಯನ್ನು ಗಮನಿಸಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಪಿಕಪ್ ಚಾಲಕ ರವೀಂದ್ರ ಮಂಜಪ್ಪ ನಾಯ್ಕ ಅವರು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು; ಗುರು ವಿದ್ಯಾಧಿರಾಜ ಕಾಲೇಜಿನಲ್ಲಿ ನೃತ್ಯಾಂಜಲಿ ಸಂಭ್ರಮ

ಮುರುಡೇಶ್ವರದಲ್ಲಿ ಸಮುದ್ರ ಆರತಿ ವೈಭವ; ನವಧಾನ್ಯ ಸಮರ್ಪಣೆ