ಭಟ್ಕಳ ಡೈರಿ ವರದಿ
ಭಟ್ಕಳ: ಆಹಾರವಿಲ್ಲ, ನೀರಿಲ್ಲ… ತೆಂಗಿನ ಮರಗಳಿಗೆ ಹಗ್ಗಗಳಿಂದ ಕಟ್ಟಿಹಾಕಿದ ಎಂಟು ಜಾನುವಾರುಗಳು! ಇಂತಹ ಅಮಾನವೀಯ ಘಟನೆ ಭಟ್ಕಳ ಪಟ್ಟಣದ ಮೈನುದ್ದೀನ್ ಸ್ಟ್ರೀಟ್ನಲ್ಲಿ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪೊಲೀಸರ ದಾಳಿಯಲ್ಲಿ ಒಂದು ಎತ್ತು ಮೃತಪಟ್ಟಿರುವುದು ಪತ್ತೆಯಾಗಿದ್ದು, ಉಳಿದ ಏಳು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ನವೆಂಬರ್ ೧೪ರಂದು ಬೆಳಿಗ್ಗೆ ಸುಮಾರು ೯.೩೦ರ ವೇಳೆಗೆ ಭಟ್ಕಳ ಶಹರ ಪೊಲೀಸರು ಮೈನುದ್ದೀನ್ ಸ್ಟ್ರೀಟ್ನ ಬ್ಲಾಕ್ ಬಿ, ೨ನೇ ಕ್ರಾಸ್ನಲ್ಲಿರುವ ಖುಲ್ಲಾ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ತೌಶಿಫ್ ಮಹಮ್ಮದ್ ಖಾಸಿಂ ಸಾಹೇಬ್ ಎಂಬಾತನ ಮನೆಯ ಸಮೀಪದ ಖಾಲಿ ಜಾಗದಲ್ಲಿ ಎಂಟು ಜಾನುವಾರುಗಳನ್ನು ಯಾವುದೇ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೆ ತೆಂಗಿನ ಮರಗಳಿಗೆ ಹಗ್ಗಗಳಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಒಂದು ಎತ್ತು ಸ್ಥಳದಲ್ಲೇ ಸಾವು:
ಪತ್ತೆಯಾದ ಎಂಟು ಜಾನುವಾರುಗಳ ಪೈಕಿ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟಿತ್ತು. ಉಳಿದ ಏಳು ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಜಾನುವಾರುಗಳ ಅಂದಾಜು ಮೌಲ್ಯ ಸುಮಾರು ೮೯ ಸಾವಿರ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಾನುವಾರುಗಳನ್ನು ಕಟ್ಟಲು ಬಳಸಿದ್ದ ಏಳು ಹಗ್ಗಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ ೨೨೪/೨೦೨೬ರ ಅಡಿಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ೧೯೬೦ರ ಕಲಂ ೧೧(೧)(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ ೨೦೨೩ರ ಕಲಂ ೩(೫)ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್ಐ ತಿಮ್ಮಪ್ಪ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬಂಧನ ಇನ್ನೂ ಬಾಕಿಯಿದೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಮುಟ್ಟಳ್ಳಿ ಬೈಪಾಸ್ನಲ್ಲಿ ಭೀಕರ ಅಪಘಾತ: ಕಾರು–ಪಿಕಪ್ ಮುಖಾಮುಖಿ ಡಿಕ್ಕಿ, ಏಳು ಮಂದಿ ಗಾಯ


