ಭಟ್ಕಳ ಡೈರಿ ವರದಿ
ಭಟ್ಕಳ: ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ಬೈಲೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನವೆಂಬರ್ ೧೩ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಮಠದ ಆವರಣದಲ್ಲಿ ನಡೆದ ರಾಜ್ಯಮಟ್ಟದ ೧೪ ಮತ್ತು ೧೭ ವರ್ಷ ವಯೋಮಾನದ ಮಕ್ಕಳ ಯೋಗಾಸನ ಸ್ಪರ್ಧೆಯಲ್ಲಿ ಬೈಲೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
೯ನೇ ತರಗತಿಯ ಸೋನಾ ನಾಗೇಶ ನಾಯ್ಕ ಮತ್ತು ತನುಶ್ರೀ ಗಣಪತಿ ಗೌಡ ಅವರು ಆರ್ಟಿಸ್ಟಿಕ್ ಜೋಡಿ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಇನ್ನು, ೧೪ ವರ್ಷದೊಳಗಿನ ವಿಭಾಗದ ಆರ್ಟಿಸ್ಟಿಕ್ ಜೋಡಿ ಯೋಗಾಸನ ಸ್ಪರ್ಧೆಯಲ್ಲಿ ೭ನೇ ತರಗತಿಯ ಪೂಜಿತ ಗಣಪತಿ ದೇವಾಡಿಗ ಮತ್ತು ಹರ್ಷ ಮಂಜುನಾಥ ಗೊಂಡ ತೃತೀಯ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ರಿದಮಿಕ್ ಜೋಡಿ ಯೋಗಾಸನ ಸ್ಪರ್ಧೆಯಲ್ಲಿ ೬ನೇ ತರಗತಿಯ ಆರ್ಯನ್ ಕೇಶವ ದೇವಾಡಿಗ ಮತ್ತು ಮೌನೇಶ ಶ್ರೀನಿವಾಸ ಮೊಗೇರ ತೃತೀಯ ಸ್ಥಾನ ಪಡೆದು ಶಾಲೆಯ ಸಾಧನೆಗೆ ಮತ್ತಷ್ಟು ಮೆರುಗು ತಂದಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಡ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಆಶ್ರಯದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಮಟ್ಟದಲ್ಲಿ ಭಟ್ಕಳದ ವಿದ್ಯಾರ್ಥಿಗಳು ಯೋಗಾಸನದಲ್ಲಿ ತೋರಿದ ಈ ಪ್ರತಿಭೆ ಸ್ಥಳೀಯ ಕ್ರೀಡಾ ಹಾಗೂ ಶೈಕ್ಷಣಿಕ ವಲಯದಲ್ಲಿ ಹೆಮ್ಮೆ ಮೂಡಿಸಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು; ಗುರು ವಿದ್ಯಾಧಿರಾಜ ಕಾಲೇಜಿನಲ್ಲಿ ನೃತ್ಯಾಂಜಲಿ ಸಂಭ್ರಮ
ಮುರುಡೇಶ್ವರದಲ್ಲಿ ಸಮುದ್ರ ಆರತಿ ವೈಭವ; ನವಧಾನ್ಯ ಸಮರ್ಪಣೆ


