ಭಟ್ಕಳ ಡೈರಿ ವರದಿ
ಭಟ್ಕಳ: ಮುಂಡಳ್ಳಿಯ ಸರಾಬಿ ನದಿ ದಡದಲ್ಲಿರುವ ಸ್ಮಶಾನ ಇದೀಗ ವಿವಾದಕ್ಕೆ ಎಡೆಯಾಗಿದೆ. ಸ್ಮಶಾನದಿಂದ ಹೊರಬರುವ ಹೊಗೆ ಜನವಸತಿ ಪ್ರದೇಶಗಳಿಗೆ ಹರಡುತ್ತಿದ್ದು, ಸ್ಥಳೀಯ ನಿವಾಸಿಗಳ ಆರೋಗ್ಯ ಮತ್ತು ನೆಮ್ಮದಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಡಳ್ಳಿಯಲ್ಲಿರುವ ಸ್ಮಶಾನವನ್ನು ಸೂಕ್ತ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸುವಂತೆ ಡೊಂಗರಪಳ್ಳಿಯ ನೌಜವಾನ್ ಇತ್ತಿಹಾದ್ ಸಮಿತಿ ಅಧಿಕಾರಿಗಳನ್ನು ಒತ್ತಾಯಿಸಿದೆ.
ಸಮಿತಿ ಅಧ್ಯಕ್ಷ ಫೈಝಾನ್ ನದ್ವಿ ನೇತೃತ್ವದಲ್ಲಿ ಮಹಿಳೆಯರು ಸೇರಿದಂತೆ ೫೦ಕ್ಕೂ ಹೆಚ್ಚು ಜನರು ಸೋಮವಾರ ಭಟ್ಕಳ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಾಮಾಜಿಕ ಕಾರ್ಯಕರ್ತೆ ಅಮೀನಾ ಬೆಳ್ಳಿ ಅವರು ಮನವಿಯಲ್ಲಿನ ಅಂಶಗಳನ್ನು ಸಹಾಯಕ ಆಯುಕ್ತರ ಮುಂದೆ ಓದಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಮಾಜಿ ಅಧ್ಯಕ್ಷ ಯೂಸುಫ್ ಬೆಳ್ಳಿ, ಡೊಂಗರಪಳ್ಳಿ ಮತ್ತು ಮುಂಡಳ್ಳಿ ನಡುವೆ ಸರಾಬಿ ನದಿ ಹರಿಯುತ್ತಿದ್ದು, ನದಿಯ ಮುಂಡಳ್ಳಿ ಭಾಗದ ದಡದಲ್ಲಿ ಸ್ಮಶಾನ ಸ್ಥಾಪಿಸಲಾಗಿದೆ. ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸುವ ಸಂದರ್ಭದಲ್ಲಿ ಉಂಟಾಗುವ ಹೊಗೆ ನದಿಯನ್ನು ದಾಟಿ ಡೊಂಗರಪಳ್ಳಿ ಹಾಗೂ ಸುತ್ತಮುತ್ತಲಿನ ಜನವಸತಿ ಪ್ರದೇಶಗಳ ಮನೆಗಳಿಗೆ ತಲುಪುತ್ತಿದೆ. ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹೊಗೆಯಿಂದ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದರು.
ಧಾರ್ಮಿಕ ಆಚರಣೆಗಳಿಗೆ ವಿರೋಧವಿಲ್ಲ: ಯಾವುದೇ ಸಮುದಾಯದ ಧಾರ್ಮಿಕ ನಂಬಿಕೆ ಅಥವಾ ಅಂತ್ಯಸಂಸ್ಕಾರದ ಸಂಪ್ರದಾಯಗಳಿಗೆ ತಮ್ಮ ವಿರೋಧವಿಲ್ಲ. ಆದರೆ ಸ್ಮಶಾನಕ್ಕೆ ಆಯ್ಕೆ ಮಾಡಿರುವ ಸ್ಥಳವು ಸುತ್ತಮುತ್ತಲಿನ ಜನರ ಆರೋಗ್ಯ, ನೆಮ್ಮದಿ ಮತ್ತು ಪರಿಸರದ ಮೇಲೆ ಪರಿಣಾಮ ಬೀರುವಂತಿದೆ ಎಂಬುದು ತಮ್ಮ ಆಕ್ಷೇಪ ಎಂದು ಸಮಿತಿ ಹೇಳಿದೆ.
ತಾತ್ಕಾಲಿಕ ಸ್ಥಗಿತಕ್ಕೂ ಮನವಿ: ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಪ್ರಸ್ತುತ ಸ್ಥಳದಲ್ಲಿ ಅಂತ್ಯಸಂಸ್ಕಾರ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸಮಿತಿ ಆಗ್ರಹಿಸಿದೆ. ಸ್ಮಶಾನದ ಸ್ಥಳವು ಜನವಸತಿ ಪ್ರದೇಶಗಳಿಗೆ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಹೊಗೆಯಿಂದ ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲಾಗುತ್ತಿರುವ ಪರಿಣಾಮದ ಕುರಿತು ಸಂಬಂಧಪಟ್ಟ ಇಲಾಖೆಗಳು ತುರ್ತು ಮೌಲ್ಯಮಾಪನ ನಡೆಸಬೇಕು ಎಂದು ಮನವಿ ಮಾಡಲಾಗಿದೆ. ಮನವಿಯ ಪ್ರತಿಗಳನ್ನು ಭಟ್ಕಳ ಡಿವೈಎಸ್ಪಿ, ಮುಂಡಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಭಟ್ಕಳ ಪುರಸಭೆ ಆಯುಕ್ತರಿಗೂ ಸಲ್ಲಿಸಲಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಮಾರುಕೇರಿ ಮರಂಬಳ್ಳಿ ಕ್ರಾಸ್ ಬಳಿ ಬೈಕ್ ಅಪಘಾತ: ಹಿಂಬದಿ ಸವಾರನಿಗೆ ಗಾಯ
ಶಿಕ್ಷಣ ಕ್ಷೇತ್ರಕ್ಕೆ ಭಟ್ಕಳದ ಕೊಂಕಣ ಖಾರ್ವಿ ಸಮಾಜದ ಬೆಂಬಲದ ಹಸ್ತ, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಹೂಡಿಕೆ


