ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಕಂಡೆಕೊಡ್ಲು ಪ್ರದೇಶದಲ್ಲಿ ಚಿರತೆಯೊಂದು ಮುಂಜಾನೆ ದಾಳಿ ನಡೆಸಿ ಜಾನುವಾರುಗಳನ್ನು ಬಲಿ ಪಡೆದ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕೊಟ್ಟಿಗೆಯಲ್ಲಿದ್ದ ಕರುವನ್ನು ಕೊಂದು ತಿಂದು ಹಾಕಿರುವ ಚಿರತೆ, ಮತ್ತೊಂದು ದನದ ಮೇಲೂ ದಾಳಿ ನಡೆಸಿದೆ.

ಮುಂಜಾನೆ ಕೊಟ್ಟಿಗೆಗೆ ನುಗ್ಗಿದ ಚಿರತೆ ಕರುವನ್ನು ಕೊಂದು ಮಾಂಸಕ್ಕಾಗಿ ತಿಂದು ಹಾಕಿದೆ. ಬಳಿಕ ಮತ್ತೊಂದು ದನದ ಮೇಲೂ ದಾಳಿ ನಡೆಸಿದೆ. ಆದರೆ ದನಕ್ಕೆ ಹಗ್ಗ ಕಟ್ಟಿದ್ದರಿಂದ ಅದನ್ನು ಎತ್ತಿಕೊಂಡು ಹೋಗಲು ಸಾಧ್ಯವಾಗದೆ, ರಸ್ತೆಯಲ್ಲೇ ಬಿಟ್ಟು ಚಿರತೆ ಸಮೀಪದ ಅರಣ್ಯದತ್ತ ಪರಾರಿಯಾಗಿದೆ.

ಘಟನೆಯಿಂದ ಜಾನುವಾರುಗಳ ಮಾಲೀಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಈ ಭಾಗದಲ್ಲಿ ಚಿರತೆ ಹಾವಳಿ ನಿರಂತರವಾಗಿದ್ದು, ಈ ಕುರಿತು ಹಲವು ಬಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಚಿರತೆ ಹಾವಳಿಯಿಂದ ಜಾನುವಾರುಗಳ ಜೀವಕ್ಕೆ ಮಾತ್ರವಲ್ಲದೆ, ಜನರ ಸುರಕ್ಷತೆಗೂ ಅಪಾಯ ಎದುರಾಗಿದೆ. ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನ ಪತ್ತೆಹಚ್ಚಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿರತೆ ಹಾವಳಿಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಶ್ರೀ ಗುರು ವಿದ್ಯಾಧಿರಾಜ ಕಾಲೇಜಿಗೆ ಹೆಮ್ಮೆ ತಂದ ಸಿಂಚನಾ

ಮುಂಡಳ್ಳಿ ಸ್ಮಶಾನ ಸ್ಥಳಾಂತರಕ್ಕೆ ಡೊಂಗರಪಳ್ಳಿ ನಿವಾಸಿಗಳ ಆಗ್ರಹ