ಭಟ್ಕಳ ಡೈರಿ ವರದಿ
ಹೊನ್ನಾವರ: ಗ್ರಾಮೀಣ ಜನರ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕೆ ನೆರವಾಗುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಇದೀಗ ವಿ.ಬಿ.ಜಿ. ರಾಮ್ ಜೀ ಯೋಜನೆಯಾಗಿ ಬದಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಭಟ್ಕಳ ತಾಲೂಕು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಹೇಳಿದರು. ಹೊನ್ನಾವರ ತಾಲೂಕಿನ ಬಳ್ಕೂರು ಗ್ರಾಮ ಪಂಚಾಯತ್ನಲ್ಲಿ ಮಂಗಳವಾರ ನಡೆದ ೨೦೨೬-೨೭ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಯೋಜನೆಯಡಿ ಗ್ರಾಮೀಣ ಜನರಿಗೆ ಲಭ್ಯವಿರುವ ಸೌಲಭ್ಯಗಳು, ಉದ್ಯೋಗಾವಕಾಶಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮರ್ಪಕ ಮಾಹಿತಿ ಇರಬೇಕು. ಜನರು ಯೋಜನೆಯ ಬಗ್ಗೆ ತಿಳಿದುಕೊಂಡು ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನಾ ವರದಿಯನ್ನು ಮಂಡಿಸಿ, ಪರಿಶೀಲನೆಯ ವೇಳೆ ಕಂಡುಬಂದ ಅಂಶಗಳನ್ನು ಸಭೆಯ ಗಮನಕ್ಕೆ ತಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ಗಣೇಶ ನಾಯ್ಕ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ಶೇ.೯೦ರಷ್ಟು ಕಾಮಗಾರಿಗಳು ಉತ್ತಮವಾಗಿ ನಡೆದಿರುವುದು ಪರಿಶೋಧನೆಯಿಂದ ತಿಳಿದುಬಂದಿದೆ. ಉಳಿದ ಕಾಮಗಾರಿಗಳಲ್ಲಿನ ಲೋಪದೋಷಗಳು ಹಾಗೂ ಇತರ ಅಂಶಗಳ ಕುರಿತು ತಕ್ಷಣ ಸೂಕ್ತ ಅನುಪಾಲನಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಬುರಾಯ ನಾಯ್ಕ ಸ್ವಾಗತಿಸಿ, ಕಾಮಗಾರಿಗಳ ಪಟ್ಟಿ ಹಾಗೂ ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ಪಂಚಾಯತ್ ಕಾರ್ಯದರ್ಶಿ ದೇವರಾಯ ನಾಯ್ಕ ವಂದಿಸಿದರು. ಸಭೆಯಲ್ಲಿ ಪಂಚಾಯತ್ ಸಿಬ್ಬಂದಿ ವಿಷ್ಣು ನಾಯ್ಕ, ಮಣಿಕಂಠ ನಾಯ್ಕ, ಶ್ವೇತಾ ನಾಯ್ಕ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಯಮುನಾ ನಾಯ್ಕ, ಶಿಲ್ಪಾ ನಾಯ್ಕ ಹಾಗೂ ಬಿ.ಎಫ್.ಟಿ. ಚಂದ್ರಕಲಾ ಮುಕ್ರಿ ಉಪಸ್ಥಿತರಿದ್ದರು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಹೆಬಳೆ ಗಾಂಧಿನಗರದಲ್ಲಿ ಓಸಿ ಜುಗಾರಾಟ: ೨೭ ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲು




