ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ವೆಂಕಟಾಪುರದ ಕಂಡೆಕೋಡ್ಲು ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಜನವಸತಿ ಮತ್ತು ಕೃಷಿ ಪ್ರದೇಶಗಳ ಸಮೀಪವೇ ಚಿರತೆ ಓಡಾಡುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅದನ್ನು ತುರ್ತಾಗಿ ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ರಾತ್ರಿ ವೇಳೆ ಸನಿಯಾದ ಅರಣ್ಯದಿಂದ ಹುಲಿ ಘರ್ಜನೆಯಂತಹ ಧ್ವನಿ ಕೇಳಿ ಬರುತ್ತದೆ ಎಂದೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಸೆಪ್ಟೆಂಬರ್ ೧೬ರಂದು ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಅಂದು ಸಂಜೆ ೬.೪೦ರ ಸುಮಾರಿಗೆ ಸಾಲುಮರದ ತಿಮ್ಮಕ್ಕ ಉದ್ಯಾನವನದ ಹಿಂಭಾಗದಲ್ಲಿರುವ ದೊಡ್ಡ ಬಂಡೆಯ ಮೇಲೆ, ವಸಂತ ಕುನಾಲ ಅವರ ಮನೆಯ ಹಿಂಬದಿಯ ಗುಡ್ಡದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಈ ಭಾಗದಲ್ಲಿ ಈ ಹಿಂದೆಯೂ ಹುಲಿ ಕಾಣಿಸಿಕೊಂಡಿದ್ದು, ಹಸು, ಕರುಗಳು ಹಾಗೂ ಸಾಕು ನಾಯಿಗಳು ಹುಲಿಗೆ ಬಲಿಯಾಗಿವೆ. ಜನವಸತಿ ಪ್ರದೇಶದ ಸಮೀಪವೇ ಹುಲಿಯ ಹೆಜ್ಜೆ ಗುರುತುಗಳೂ ಪತ್ತೆಯಾಗಿವೆ ಎಂದು ಕಂಡೆಕೋಡ್ಲು ಗ್ರಾಮಸ್ಥರು ತಿಳಿಸಿದ್ದಾರೆ.
ಅರಣ್ಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದರೂ ನಿರ್ಣಾಯಕ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿ ಹಿಂತಿರುಗುತ್ತಿದ್ದಾರೆಯೇ ಹೊರತು, ಪ್ರಾಣಿಗಳನ್ನು ಪತ್ತೆಹಚ್ಚಿ ಸೆರೆಹಿಡಿಯುವ ಪ್ರಯತ್ನ ನಡೆಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳ ಭೀತಿಯಿಂದ ರೈತರು ತೋಟ ಹಾಗೂ ಗದ್ದೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಕೂಡ ನಿರ್ಭೀತಿಯಿಂದ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವ-ವನ್ಯಜೀವಿ ಸಂಘರ್ಷ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು. ತಜ್ಞರ ತಂಡವನ್ನು ಸ್ಥಳಕ್ಕೆ ನಿಯೋಜಿಸಿ, ಅಗತ್ಯ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಹುಲಿಯ ಚಲನವಲನಗಳನ್ನು ಪತ್ತೆಹಚ್ಚಬೇಕು. ಬಳಿಕ ಬೋನು ಇರಿಸಿ ಪ್ರಾಣಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಸೂಕ್ತ ದಟ್ಟ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಕಂಡೆಕೊಡ್ಲಿನಲ್ಲಿ ಚಿರತೆ ಅಟ್ಟಹಾಸ: ಕರು ಬಲಿ, ಮತ್ತೊಂದು ದನದ ಮೇಲೆ ದಾಳಿ; ಗ್ರಾಮಸ್ಥರಲ್ಲಿ ಆತಂಕ



