ಭಟ್ಕಳ ಡೈರಿ ವರದಿ
ಭಟ್ಕಳ: ಉತ್ತರ ಕನ್ನಡದ ಅರಬ್ಬಿ ಸಮುದ್ರ ತೀರದಲ್ಲಿರುವ ಪ್ರವಾಸೋದ್ಯಮದ ಅಪಾರ ಸಾಧ್ಯತೆಗಳನ್ನು ಜಗತ್ತಿಗೆ ಪರಿಚಯಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಜಿಲ್ಲೆಯ ಏಳು ಕಡಿಮೆ ಪರಿಚಿತ ದ್ವೀಪಗಳನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ₹೩೦೭.೭೧ ಕೋಟಿ ಮೊತ್ತದ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯಲ್ಲಿ ಭಟ್ಕಳ ತಾಲೂಕಿಗೆ ಸೇರಿದ ಹೊಗ್ ಐಲ್ಯಾಂಡ್ ಮತ್ತು ಕಿರಿ ಕುಂಡ ದ್ವೀಪಗಳೂ ಸೇರಿರುವುದು ಸ್ಥಳೀಯವಾಗಿ ವಿಶೇಷ ಮಹತ್ವ ಪಡೆದಿದೆ. ಅದರಲ್ಲೂ ಸ್ಥಳೀಯವಾಗಿ ಜಾಲಿಕುಂಡ ಗುಡ್ಡ ಎಂದು ಕರೆಯಲ್ಪಡುವ ಹೊಗ್ ಐಲ್ಯಾಂಡ್ ಅಭಿವೃದ್ಧಿಗೆ ₹೫೯.೯೯ ಕೋಟಿ ಹೂಡಿಕೆ ಪ್ರಸ್ತಾಪಿಸಲಾಗಿದ್ದು, ಏಳು ದ್ವೀಪಗಳ ಪೈಕಿ ಇದು ಎರಡನೇ ಅತಿ ದೊಡ್ಡ ಹೂಡಿಕೆಯಾಗಿದೆ. ಕಿರಿ ಕುಂಡ (ಕಿರಿಕೊಂಡ) ದ್ವೀಪಕ್ಕೆ ₹೨೩.೯೯ ಕೋಟಿ ಹೂಡಿಕೆ ನಿಗದಿಪಡಿಸಲಾಗಿದೆ.
ಈ ಎರಡು ದ್ವೀಪಗಳ ಅಭಿವೃದ್ಧಿಗೆ ಒಟ್ಟು ₹೮೩.೯೮ ಕೋಟಿ ಹೂಡಿಕೆ ಪ್ರಸ್ತಾಪಿಸಲಾಗಿದೆ. ವಿಶೇಷವಾಗಿ ಹೊಗ್ ಐಲ್ಯಾಂಡ್ಗೆ ದೊಡ್ಡ ಮೊತ್ತದ ಹೂಡಿಕೆ ನಿಗದಿಯಾಗಿರುವುದು ಭಟ್ಕಳದ ಪ್ರವಾಸೋದ್ಯಮ ಬೆಳವಣಿಗೆಗೆ ಮಹತ್ವದ ಅವಕಾಶವೆಂದು ಪರಿಗಣಿಸಲಾಗಿದೆ. ಇದರಿಂದ ಭಟ್ಕಳದ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆಯುವ ನಿರೀಕ್ಷೆ ಮೂಡಿದೆ.
ರೆಸಾರ್ಟ್, ಸಾಹಸ ಕ್ರೀಡೆ, ದ್ವೀಪ ಸುತ್ತಾಟಕ್ಕೆ ಅವಕಾಶ: ಈ ದ್ವೀಪಗಳನ್ನು ಪರಿಸರ ಸ್ನೇಹಿ ಪ್ರವಾಸಿ ತಾಣಗಳನ್ನಾಗಿ ರೂಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇಲ್ಲಿ ಆಧುನಿಕ ವಸತಿ ಸೌಲಭ್ಯಗಳು, ರೆಸಾರ್ಟ್ಗಳು, ಮನರಂಜನಾ ಕೇಂದ್ರಗಳು, ಸಾಹಸ ಕ್ರೀಡೆಗಳು ಹಾಗೂ ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಪ್ರವಾಸ ಕೈಗೊಳ್ಳುವ ವ್ಯವಸ್ಥೆಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ: ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಯೋಜನೆ ಜಾರಿಯಾಗಲಿದೆ. ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಖಾಸಗಿ ಅಭಿವೃದ್ಧಿದಾರರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸಂಸ್ಥೆಗಳಿಗೆ ೩೦ ವರ್ಷಗಳ ಗುತ್ತಿಗೆ ನೀಡಲಾಗುತ್ತದೆ. ಅಗತ್ಯ ಅನುಮೋದನೆ ಮತ್ತು ಷರತ್ತುಗಳ ಪೂರೈಕೆಗೆ ಒಳಪಟ್ಟು ಮತ್ತಷ್ಟು ೩೦ ವರ್ಷ ವಿಸ್ತರಣೆಗೆ ಅವಕಾಶವಿರಲಿದೆ. ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಕರ್ನಾಟಕ ಮೆರಿಟೈಮ್ ಬೋರ್ಡ್ ನಿರ್ವಹಿಸಲಿದೆ.
ಪರಿಸರ ಸಂರಕ್ಷಣೆಗೆ ಕಡ್ಡಾಯ ಷರತ್ತು: ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ದ್ವೀಪಗಳ ನೈಸರ್ಗಿಕ ಪರಿಸರಕ್ಕೆ ಹಾನಿಯಾಗದಂತೆ ಸರ್ಕಾರ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ. ಪ್ರತಿ ದ್ವೀಪದ ಪರಿಸರ ಸಾಮರ್ಥ್ಯವನ್ನು ಅಧ್ಯಯನ ಮಾಡಿ, ಎಷ್ಟು ಪ್ರವಾಸಿಗರನ್ನು ಮತ್ತು ಯಾವ ಪ್ರಮಾಣದ ಅಭಿವೃದ್ಧಿಯನ್ನು ಅದು ಸಹಿಸಿಕೊಳ್ಳಬಲ್ಲದು ಎಂಬುದನ್ನು ನಿರ್ಧರಿಸಲಾಗುತ್ತದೆ. ಅಭಿವೃದ್ಧಿದಾರರು ಸಮಗ್ರ ದ್ವೀಪ ನಿರ್ವಹಣಾ ಯೋಜನೆ (IIMP) ಸಿದ್ಧಪಡಿಸಬೇಕು. ಪರಿಸರ ಮತ್ತು ಅರಣ್ಯ ಇಲಾಖೆಗಳೂ ಸೇರಿದಂತೆ ಅಗತ್ಯ ಎಲ್ಲ ಕಾನೂನುಬದ್ಧ ಅನುಮತಿಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ಭಟ್ಕಳದ ಪ್ರವಾಸೋದ್ಯಮಕ್ಕೆ ಹೊಸ ಅವಕಾಶವೇ?: ಈಗಾಗಲೇ ಮುರುಡೇಶ್ವರದ ನೇತ್ರಾಣಿ ದ್ವೀಪ ಸ್ಕೂಬಾ ಡೈವಿಂಗ್ ಮೂಲಕ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದೀಗ ಹೊಗ್ ಐಲ್ಯಾಂಡ್ ಮತ್ತು ಕಿರಿ ಕುಂಡ ದ್ವೀಪಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಿರುವುದು ಭಟ್ಕಳದ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆದಿಡಬಹುದು. ಯೋಜನೆ ಕಾರ್ಯರೂಪಕ್ಕೆ ಬಂದರೆ ಸ್ಥಳೀಯ ಯುವಕರಿಗೆ ಉದ್ಯೋಗ, ಪ್ರವಾಸೋದ್ಯಮ ಆಧಾರಿತ ಉದ್ಯಮಗಳಿಗೆ ಉತ್ತೇಜನ, ಸಾರಿಗೆ ಮತ್ತು ಆತಿಥ್ಯ ಕ್ಷೇತ್ರಗಳ ಬೆಳವಣಿಗೆಗೆ ಅವಕಾಶ ಸಿಗಬಹುದು.
ಆದರೆ ಭಟ್ಕಳದ ಪಾಲಿಗೆ ಈ ಯೋಜನೆಯ ನಿಜವಾದ ಯಶಸ್ಸು ಕೇವಲ ಹೂಡಿಕೆಯ ಮೊತ್ತದಿಂದ ನಿರ್ಧಾರವಾಗುವುದಿಲ್ಲ. ದ್ವೀಪಗಳಿಗೆ ಅಗತ್ಯ ಸಂಪರ್ಕ ವ್ಯವಸ್ಥೆ, ಸ್ಥಳೀಯರಿಗೆ ಉದ್ಯೋಗಾವಕಾಶ, ಮೂಲಸೌಕರ್ಯ ಮತ್ತು ಪರಿಸರ ಸಂರಕ್ಷಣೆಗೆ ನೀಡುವ ಆದ್ಯತೆಯೂ ನಿರ್ಣಾಯಕವಾಗಲಿದೆ. ಭಟ್ಕಳದ ಕರಾವಳಿಯಲ್ಲಿರುವ ಈ ದ್ವೀಪಗಳು ಮುಂದಿನ ದಿನಗಳಲ್ಲಿ ಜಾಗತಿಕ ಪ್ರವಾಸೋದ್ಯಮದ ನಕ್ಷೆಯಲ್ಲಿ ಗುರುತಿಸಿಕೊಳ್ಳುತ್ತವೆಯೇ ಎಂಬುದನ್ನು ಯೋಜನೆಯ ಅನುಷ್ಠಾನವೇ ನಿರ್ಧರಿಸಲಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಹೆಬಳೆಯಲ್ಲಿ ಧಾರವಾಡ ಮೂಲದ ವ್ಯಕ್ತಿ ಪೊಲೀಸ್ ವಶಕ್ಕೆ
ಕಂಡೆಕೊಡ್ಲಿನಲ್ಲಿ ಚಿರತೆ ಅಟ್ಟಹಾಸ: ಕರು ಬಲಿ, ಮತ್ತೊಂದು ದನದ ಮೇಲೆ ದಾಳಿ; ಗ್ರಾಮಸ್ಥರಲ್ಲಿ ಆತಂಕ



