ಭಟ್ಕಳ: ಭಟ್ಕಳದಲ್ಲಿ ಎಗ್ಗಿಲ್ಲದೇ ವಿತರಣೆಯಾಗಿರುವ ಅನಧಿಕೃತ ಕಾರ್ಮಿಕ ಕಾರ್ಡುಗಳನ್ನು ಕಂಡುಹಿಡಿದು ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸೆಂಟ್ರಿಂಗ್ ಕಾರ್ಮಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹಿಂದೂ ಕಾಲೋನಿಗೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ
ಇಲ್ಲಿನ ಕಾರ್ಮಿಕ ಕಛೇರಿಗೆ ಕಾರ್ಮಿಕ ನಿರೀಕ್ಷಕರಾಗಿ ಮತ್ತೆ ಅಧಿಕಾರ ಸ್ವೀಕರಿಸಿರುವ ಗುರುಪ್ರಸಾದ ನಾಯ್ಕರನ್ನು ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅನಧಿಕೃತ ಕಾರ್ಮಿಕ ಕಾರ್ಡ್ ಬಗ್ಗೆ ನಿರೀಕ್ಷಕರ ಗಮನಕ್ಕೆ ತಂದರು. ಲ್ಯಾಪ್ ಟಾಪ್ ಮತ್ತು ಶಾಲಾ ಮಕ್ಕಳ ಕಿಟ್ ಗಳ ಗೊಂದಲದ ಬಗ್ಗೆಯೂ ಅರುಹಿದ ಕಾರ್ಮಿಕರು, ತಮ್ಮ ಅವಧಿಯಲ್ಲಿ ಈ ರೀತಿಯ ಅವಾಂತರಗಳಿಗೆ ಅವಕಾಶ ಮಾಡಿಕೊಡಬಾರದೆಂದು ಒತ್ತಾಯಿಸಿದರು.
ಈ ವಿಡಿಯೋ ನೋಡಿ : ಖಾನಾಪುರದಲ್ಲಿ ಕಾಡಾನೆ ಪ್ರತ್ಯಕ್ಷ
ಇದುವರೆಗೂ ಮೇಸ್ತ್ರಿ, ಆಚಾರಿ, ಇಲೆಕ್ಟ್ರಿಶಿಯನ್ ಹಾಗೂ ಇನ್ನಿತರ ವಲಯದ ಕಾರ್ಮಿಕರಿಗೆ ಮಾತ್ರ ಟೂಲ್ ಕಿಟ್ ವಿತರಣೆಯಾಗಿದೆ. ಆದರೆ ಸೆಂಟ್ರಿಂಗ್ ಕಾರ್ಮಿಕರಿಗೆ ಯಾವುದೇ ರೀತಿಯ ಟೂಲ್ ಕಿಟ್ ಇದುವರೆಗೂ ಸಿಕ್ಕಿರುವುದಿಲ್ಲ. ಹಾಗಾಗಿ ಇದರ ಬಗ್ಗೆ ಸೂಕ್ತವಾಗಿ ಗಮನಹರಿಸಿ ಸೆಂಟ್ರಿಂಗ್ ಟೂಲ್ ಕಿಟ್ ಗಳು ಸೆಂಟ್ರಿಂಗ್ ಕಾರ್ಮಿಕರಿಗೂ ಕೂಡ ದೊರಕುವಂತಾಗಬೇಕೆಂದು ವಿನಂತಿಸಿದರು.
ನೂತನ ಕಾರ್ಮಿಕ ನಿರೀಕ್ಷಕ ಗುರುಪ್ರಸಾದ್ ನಾಯ್ಕ ಸೆಂಟ್ರಿಂಗ್ ಕಾರ್ಮಿಕರ ಮನವಿಗೆ ಸ್ಪಂದಿಸಿದರು. ತಮ್ಮ ಅವಧಿಯಲ್ಲಿ ನಿಜವಾದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ಸೆಂಟ್ರಿಂಗ್ ಕಾರ್ಮಿಕ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಉಪಾಧ್ಯಕ್ಷ ಸುಬ್ರಾಯ ನಾಯ್ಕ, ಕಾರ್ಯದರ್ಶಿಗಳಾದ ಶಿವರಾಮ ನಾಯ್ಕ ಮತ್ತು ರಾಮ ಹೆಬಳೆ, ಖಜಾಂಚಿ ಬಾಬು ನಾಯ್ಕ ಹಾಗೂ ಸಂಘದ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.