ಅಪಘಾತ-ಅವಘಡ ಸುದ್ದಿಗಳು : ಎಲ್ಲೆಲ್ಲಿ ಏನೇನು ?

ಭಟ್ಕಳ : ನಿನ್ನೆ(ಮಾ.೫) ಹಲವರಿಗೆ ಅಶುಭ ಶುಕ್ರವಾರ ಆಗಿತ್ತು. ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲೆವೆಡೆ ಶುಕ್ರವಾರ ಅಪಘಾತ – ಅವಘಡಗಳು ಸಂಭವಿಸಿವೆ. ಪ್ರತ್ಯೇಕ ಅಪಘಾತದಲ್ಲಿ ಮುಂಡಗೋಡ ತಾಲೂಕಿನ ಒಂದೇ ಗ್ರಾಮದ ಇಬ್ಬರು ಮೃತಪಟ್ಟಿದ್ದಾರೆ. ಶಿರಸಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಒಂದೇ ಗ್ರಾಮದ ಇಬ್ಬರು ಸಾವು :
ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಂದೇ ದಿನ ಒಂದೇ ಗ್ರಾಮದ ಇಬ್ಬರು ಮೃತಪಟ್ಟಿರುವ ಘಟನೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ನಂದಿಕಟ್ಟಾ ಗ್ರಾಮದ ಕೃಷ್ಣ ಸೋಮಣ್ಣ ಕಟಾವಕ‌ರ್(54) ಹಾಗೂ ತುಕಾರಾಮ ಅರ್ಜುನ ಕಮ್ಮಾರ(26) ಮೃತಪಟ್ಟ ದುದೈವಿಗಳು. ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.8 ರ ಬಳಿ ಓಮಿನಿ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಕೃಷ್ಣ ಸಾವನ್ನಪಿದ್ದರೆ, ಬೈಕ್‌ ಹಿಂಬದಿ ಸವಾರ ಗಾಯಗೊಂಡು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನೊಂದು ಅಪಘಾತ ಪ್ರಕರಣದಲ್ಲಿ ಕಲಘಟಗಿ ತಾಲೂಕಿನ ಬೆವವಂತರ ಗ್ರಾಮದ ಬಳಿ ಬೈಕ್‌ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಂದಿಕಟ್ಟಾ ಗ್ರಾಮದ ಯುವಕ ತುಕಾರಾಮ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಗುದ್ದಲಿ ಪೂಜೆ ಮಾಡುತ್ತಿರುವ ಮಂಕಾಳ ವೈದ್ಯ : ಕಾಗೇರಿ ಲೇವಡಿ

ಬಸ್-ಬೈಕ್ ಡಿಕ್ಕಿ :
ಶಿರಸಿ ತಾಲೂಕಿನ ಹುಲೆಕಲ್ ರಸ್ತೆಯ ನೀರ್ನಳ್ಳಿ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ಆಸ್ಪತ್ರೆಗೆ ರವಾನಿಸಲಾಯಿತು.

ಇದನ್ನೂ ಓದಿ : ಬಿಜೆಪಿ ಸರ್ಕಾರದ ಒಂದು ಅಭಿವೃದ್ಧಿ ತೋರಿಸಲಿ : ಕಾಗೇರಿಗೆ ಮಂಕಾಳ ತಿರುಗೇಟು

ಬಸ್-ಟ್ರಕ್ ನಡುವೆ ಅಪಘಾತ :
ಶಿರಸಿ ತಾಲೂಕಿನ ಕುಮಟಾ ರಸ್ತೆಯ ಮಂಜುಗುಣಿ ಕ್ರಾಸ್‌ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಿನಿ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಶಿರಸಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಬಸ್ ಹಾಗೂ ಮೀನು ತುಂಬಿದ್ದ ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಟ್ರಕ್ ಚಾಲಕ ಗಂಭಿರವಾಗಿ ಗಾಯಗೊಂಡಿದ್ದಾನೆ.

ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ.ಹಾನಿ:
ಶಿರಸಿ ತಾಲೂಕಿನ ಜಾನ್ಮನೆ ಬಳಿಯ ಕುಕ್ಕಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಾಮಚಂದ್ರ ಶಿವರಾಮ ಹೆಗಡೆ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಸಂಗ್ರಹಿಸಿಟ್ಟ ಲಕ್ಷಾಂತರ ರೂ. ಹುಲ್ಲುಗಳು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ದನಕರುಗಳು ಕೊಟ್ಟಿಗೆಯಿಂದ ಹೊರಗಿದ್ದ ಸಮಯದಲ್ಲಿ ಘಟನೆ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಸುದ್ದಿ ತಿಳಿದು ತಕ್ಷಣ ಆಗಮಿಸಿದ ಅಗ್ನಿಶಾಮಕದಳದವರು ಹೆಚ್ಚಿನ ಅನಾಹುತ ತಡೆದಿದ್ದಾರೆ.

ಟೆಂಪೋ-ಜೀಪ್ ಡಿಕ್ಕಿ :
ಭಟ್ಕಳದ ಸಾಗರ ರಸ್ತೆಯ ಗುಳ್ಮಿ ಕ್ರಾಸ್ ನಲ್ಲಿ ಪ್ಯಾಸೆಂಜರ್ ಟೆಂಪೋ ಮತ್ತು ಬೊಲೆರೊ ಜೀಪ್ ನಡುವೆ ಡಿಕ್ಕಿಯಾಗಿದೆ. ವಾಹನಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದ್ದು ಬಿಟ್ಟರೆ ಹೆಚ್ಚೇನೂ ಅನಾಹುತ ಸಂಭವಿಸಿಲ್ಲ. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿಲ್ಲ.