ಭಟ್ಕಳ: ಆದರ್ಶ ಪುರುಷರ ಜೀವನ ಚರಿತ್ರೆ ಪಠ್ಯ ಪುಸ್ತಕದಲ್ಲಿ ಅಳವಡಿಸಿದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಹಿಂದೆ ನಾವು ಕಲಿಯುತ್ತಿರುವಾಗ ಮಹರ್ಷಿ ವಾಲ್ಮೀಕಿ, ರಾಮಾಯಣ, ಮಹಾಭಾರತ ಸೇರಿದಂತೆ ಚರಿತ್ರೆಯ ಪಾಠ ಇತ್ತು ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಭಟ್ಕಳದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದಲಾದ ಸಂದರ್ಭದಲ್ಲಿ ತಾವು ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಅನುಸರಿಸಿದ ಒಂದು ಮಾರ್ಗದಲ್ಲಿನ ಅಪಕೃತ್ಯದ ಅರಿವಾಗಿ ಅವರಲ್ಲಿ ಆದ ಬದಲಾವಣೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ಪಾಠವಾಗಿದೆ. ಅದು ಪಠ್ಯದಲ್ಲಿದ್ದರೆ ವಿದ್ಯಾರ್ಥಿಗಳಿಗೆ ಜೀವನ ಪಾಠವಾಗುತ್ತಿತ್ತು ಎಂದು ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಾಲ್ಮೀಕಿ ಮಹರ್ಷಿಗಳ ಪಠ್ಯ ಇದ್ದುದನ್ನು ನೆನೆಸಿಕೊಂಡರು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಇತಿಹಾಸ ಪಠ್ಯವಿಲ್ಲದೇ ಇರುವುದು ದೊಡ್ಡ ತಪ್ಪು ಎಂದ ಅವರು ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳಿಗೆ ಇತಿಹಾಸದ ಪರಿಚಯ ಮಾಡಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿ ಡಾ. ನಯನಾ ಎನ್. ಮಾತನಾಡಿ, ಸಾಮಾನ್ಯ ಬೇಟೆಗಾರರ ಕುಟುಂಬದಲ್ಲಿ ಜನಿಸಿ ದರೋಡೆಕೋರನಾದ ವ್ಯಕ್ತಿಯೋರ್ವ ಬದಲಾವಣೆ ಹೊಂದಿ ಮಹರ್ಷಿಯಾಗಬಹುದು ಎನ್ನುವುದನ್ನು ಸಮಾಜಕ್ಕೆ ತೊರಿಸಿಕೊಟ್ಟ ಆದರ್ಶ ವ್ಯಕ್ತಿಗಳು ನಮ್ಮ ಜೀವನದಲ್ಲಿ ಆದರ್ಶಪ್ರಾಯರು. ತಪ್ಪು ಮಾಡಿದವರು ಅವಕಾಶವಿದ್ದಾಗ ಬದಲಾಗಬೇಕು. ಜೀವನದಲ್ಲಿ ತಪ್ಪು ಮಾಡದವರಿಲ್ಲ. ಆದರೆ ಅದನ್ನು ತಿದ್ದಿಕೊಂಡು ಬದಲಾಗುವುದು ಮುಖ್ಯ ಎಂದೂ ಹೇಳಿದರು.
ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಸೋಮಯ್ಯ ಟಿ. ಗೊಂಡ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಡಿ.ವೈ.ಎಸ್.ಪಿ. ಶ್ರೀಕಾಂತ ಕೆ., ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಂಜಪ್ಪ ಎನ್. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ನಿರ್ವಹಿಸಿದರು. ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ವಂದಿಸಿದರು.