ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಗಳ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಚಿತ್ರಾಪುರದಲ್ಲಿ ಶುಕ್ರವಾರ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮಂಜುನಾಥ ರಾಮಚಂದ್ರ ನಾಯ್ಕ ಎನ್ನುವವರಿಗೆ ಸೇರಿದ ಮನೆ ಕಳ್ಳತನವಾಗಿದೆ. ಇವರು ಟೆಂಪೋ ಚಾಲಕರಾಗಿದ್ದಾರೆ. ಕೇವಲ ೨ ಗಂಟೆಯ ಅವಧಿಯಲ್ಲಿ ಈ ಕಳ್ಳತನ ಮಾಡಲಾಗಿದೆ. ಈ ಕಳ್ಳತನ ನೋಡಿ ಮನೆಯ ಮಾಲೀಕರು ಆಶ್ಚರ್ಯಗೊಂಡಿದ್ದಾರೆ. ಬೆಳಿಗ್ಗೆ ೮ ಗಂಟೆಗೆ ಮನೆಯ ಮಾಲೀಕರಾದ ಮಂಜುನಾಥ ನಾಯ್ಕ ತಮ್ಮ ಕೆಲಸಕ್ಕೆ ತೆರಳಿದ್ದರು. ಬೆಳಿಗ್ಗೆ ೮.೫೦ಕ್ಕೆ ಇವರ ಪತ್ನಿ ಬೇಬಿ ನಾಯ್ಕ ಕೆಂಬ್ರೆಯಲ್ಲಿರುವ ಪೇಪರ್ ಕಾರ್ಖಾನೆಗೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ೨ ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ : ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ವರ್ಧಂತಿ ಉತ್ಸವ ಸಂಪನ್ನ
ಆಶ್ಚರ್ಯ ಎಂಬಂತೆ ಮನೆಯ ಮುಂದಿನ ಬಾಗಿಲು ಮುರಿಯದೆ, ಹಿಂದಿನ ಬಾಗಿಲು ಕೂಡ ಮುರಿಯದೆ ಕಳ್ಳತನ ಮಾಡಲಾಗಿದೆ. ಮನೆಯ ಹಿಂದಿನ ಬಾಗಿಲು ತೆರೆದು ಮನೆಯ ಒಳಗೆ ಕಳ್ಳರು ನುಗ್ಗಿದ್ದಾರೆ. ಮನೆಯ ಒಳಗಿನ ಕೋಣೆಯಲ್ಲಿದ್ದ ಕಪಾಟಿನ ಬಾಗಿಲು ಮುರಿಯಲಾಗಿದೆ. ಅಂದಾಜು ೨೫೦ ಗ್ರಾಂ ಚಿನ್ನಾಭರಣ ಹಾಗೂ ೩೧ ಸಾವಿರ ರೂ. ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಮನೆಯ ಮಾಲೀಕ ೧೧ ಗಂಟೆ ವೇಳೆ ಮನೆ ಹಿಂಭಾಗದ ಅಡುಗೆ ಕೋಣೆಯಲ್ಲಿ ಒಲೆಯ ಮೇಲೆ ಇಟ್ಟಿದ್ದ ಅನ್ನ ನೋಡಲು ಬಂದ ವೇಳೆ ಮನೆ ಕಳ್ಳತನವಾಗಿರುವುದು ತಿಳಿದು ಬಂದಿದೆ. ಸುದ್ದಿ ತಿಳಿದು ಗ್ರಾಮೀಣ ಠಾಣಾ ಪೊಲೀಸರು ಬೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.