ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಕಡವಿನಕಟ್ಟೆ, ಕಂಡೆಕೊಡ್ಲು, ವೆಂಕಟಾಪುರ ಪ್ರದೇಶದ ಅಭಿವೃದ್ದಿಯ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಜಾಲಿ ಪಟ್ಟಣ ಪಂಚಾಯತಗೆ ಮನವಿ ಸಲ್ಲಿಸಿದ ಗ್ರಾಮಸ್ಥರು.

ಭಟ್ಕಳ ತಾಲೂಕಿನ ಕಡವಿನಕಟ್ಟೆ ವಾರ್ಡಿನಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣನ್ನು ತುಂಬಲಾಗಿದೆ. ಬೇಸಿಗೆಯಲ್ಲಿ ಅಕ್ಕಪಕ್ಕದ ಜಮೀನಿನ ಮಾಲೀಕರು ತಮಗೆ ಬೇಕಾದ ಸಾಮಗ್ರಿಗಳನ್ನು ಒಯ್ಯಲು ಇದೇ ಹಳ್ಳದಲ್ಲಿ ಮಣ್ಣನ್ನು ತುಂಬಿಕೊಂಡು ರಸ್ತೆ ಮಾಡಿಕೊಳ್ಳುತ್ತಾರೆ. ಇದರ ಮೂಲಕ ತಮ್ಮ ಸಾಮಗ್ರಿಗಳನ್ನು ಒಯ್ಯುತ್ತಾರೆ. ಆದರೆ ಮಳೆಗಾಲ ಪ್ರಾರಂಭವಾದ ನಂತರ ಈ ಮಣ್ಣನ್ನು ಅಲ್ಲಿಂದ ತೆಗೆಯದೆ ಹಾಗೇ ಬಿಡಲಾಗಿದೆ. ಕಳೆದ ವರ್ಷವೂ ಕೂಡ ಇದೇ ರೀತಿ ಮಣ್ಣನ್ನು ಹಾಗೇ ಬಿಟ್ಟಿದ್ದರಿಂದ ಮಳೆನೀರಿನ ರಭಸಕ್ಕೆ ಅಕ್ಕಪಕ್ಕದ ತಗ್ಗಿನಲ್ಲಿ ಇರುವ ಮನೆಗಳಿಗೆ ನೀರು ಸಹಿತ ಮಣ್ಣು, ಕಲ್ಲುಗಳು ನುಗ್ಗಿ ನಷ್ಟ ಉಂಟಾಗಿತ್ತು. ಈ ವರ್ಷವೂ ಇದೇ ರೀತಿ ಹಾಕಿರುವ ಮಣ್ಣನ್ನು ಮಳೆಗಾಲದ ಪೂರ್ವದಲ್ಲಿ ಖುಲ್ಲಾಪಡಿಸಿಕೊಡುವಂತೆ ಮುಖ್ಯಾಧಿಕಾರಿಗೆ ದೂರವಾಣಿ ಮುಖಾಂತರ ಸಂಪರ್ಕ ಮಾಡಲಾಗಿತ್ತು. ಅಧಿಕಾರಿಗಳು ಕೂಡ ಖುದ್ದಾಗಿ ಬಂದು ಪರಿಶೀಲನೆ ಮಾಡಿ, ಖುಲ್ಲಾಪಡಿಸಿಕೊಡುತ್ತೇನೆಂದು ಭರವಸೆ ನೀಡಿ ಹೋಗಿದ್ದರು. ಅಲ್ಲಿಂದ ೨೦ ದಿನಗಳು ಕಳೆದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತುರ್ತಾಗಿ ಮಣ್ಣನ್ನು ಖುಲ್ಲಾಪಡಿಸಬೇಕು. ಕಡವಿನಕಟ್ಟೆ ವಾರ್ಡಿನ ರಸ್ತೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಹೂಳು, ಕಸಕಡ್ಡಿಗಳು ತುಂಬಿವೆ. ಅದನ್ನು ಖುಲ್ಲಾಪಡಿಸುವ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ : ಸ್ಫೂರ್ತಿ ಎಸ್. ಅಡಿಗಳ್ ಅವರಿಗೆ ಡಾಕ್ಟರೇಟ್ ಪ್ರದಾನ

ಕಂಡೆಕೊಡು ಕಡವಿಕಟ್ಟೆ ರಸ್ತೆಯ ಅಕ್ಕ-ಪಕ್ಕದಲ್ಲಿ ಕಾಡು ಮರಗಳು ಒರಗಿ ನಿಂತಿವೆ. ಅಲ್ಲದೇ ಈ ಮರಗಳಿಗೆ ತಾಗಿಕೊಂಡು ೧೧ ಕೆ.ವಿ. ಲೈನ್ ಹಾದು ಹೋಗಿದೆ. ಈ ಮರಗಳು ವಿದ್ಯುತ್ ಲೈನಿಗೆ ತಾಗಿಕೊಂಡಿವೆ. ಇತ್ತೀಚೆಗೆ ಒಂದು ಮರ ಬಿದ್ದು, ೩ ವಿದ್ಯುತ್ ಕಂಬಗಳು ಮುರಿದು ಬಿದ್ದಿತ್ತು. ಈ ಘಟನೆಯಿಂದ ಜೀವಹಾನಿಯಾಗದೆ ಇದ್ದರೂ ಮುಂದಿನ ದಿನಗಳಲ್ಲಿ ಜೀವಹಾನಿಯಾಗದೇ ಇರುವ ಹಾಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಮತ್ತು ವಿದ್ಯುತ್ ಲೈನಿಗೆ ತೊಂದರೆಯಾಗದಂತೆ ಒರಗಿರುವ ಕಾಡು ಮರಗಳನ್ನು ಖುಲ್ಲಾಪಡಿಸಿ ಸಾರ್ವಜನಿಕರ ಜೀವ ಕಾಪಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಜೂನ್‌ ೨೫ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಗ್ರಾಮ ಪಂಚಾಯತದಿಂದ ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೆಗೇರಿ ೮ ವರ್ಷಗಳು ಕಳೆದರೂ ಇವತ್ತಿನವರೆಗೆ ಕಡವಿನಕಟ್ಟೆ ವಾರ್ಡಿಗೆ ಕಸವಿಲೇವಾರಿ ವಾಹನ ಬರುತ್ತಿಲ್ಲ, ಆದರೆ ಕಡವಿನಕಟ್ಟೆ ವಾರ್ಡಿನ ನಾಗರಿಕರು ಪಟ್ಟಣ ಪಂಚಾಯತಗೆ ತೆರಿಗೆ ಭರಣ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಣ ಪಂಚಾಯತದ ಕಸವಿಲೇವಾರಿ ವಾಹನವನ್ನು ಕಡವಿನಕಟ್ಟೆ ವಾರ್ಡಿಗೆ ಪ್ರತಿ ನಿತ್ಯ ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ೭ ತಿಂಗಳ ಮಗು ಅಪಹರಣ; ದಾಂಡೇಲಿ ವ್ಯಕ್ತಿಯಿಂದ ಭಟ್ಕಳದಲ್ಲಿ ದೂರು

ಈ ಸಂದರ್ಭದಲ್ಲಿ ವಿನಾಯಕ ನಾಯ್ಕ, ರಮೇಶ ನಾಯ್ಕ, ಪರಮೇಶ್ವರ ನಾಯ್ಕ, ಪ್ರಮೋದ, ರಾಜು ನಾಯ್ಕ, ಚಂದ್ರ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.