Followup logoಭಟ್ಕಳ (Bhatkal): ನಿನ್ನೆ ಶನಿವಾರ “ರಿಯಾಲಿಟಿ ಚೆಕ್‌”  ಮೂಲಕ “ಭಟ್ಕಳ ಡೈರಿ” ಬಯಲಿಗೆಳೆದ  ಹೆಲ್ಮೆಟ್‌ ರಹಿತ ದಂಡದ ಮೊತ್ತದ ಚಿನ್ನದ ವ್ಯಾಪಾರಿಗೆ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧೀಕ್ಷಕರು ಸ್ಪಷ್ಟೀಕರಣ ನೀಡಿದ್ದಾರೆ. ಈ ಸ್ಪಷ್ಟೀಕರಣ ಓದಿದರೆ ಪಿಎಸ್‌ಐ ಯಲ್ಲಪ್ಪ ಅವರ ರಕ್ಷಣೆಗೆ ಎಸ್ಪಿ ಮುಂದಾದ್ರಾ? ಎಂಬ ಶಂಕೆ ಮೂಡುತ್ತಿದೆ. ತನಿಖೆ ಮಾಡುವ ಪೂರ್ವದಲ್ಲಿಯೇ ಎಸ್ಪಿ ನಾರಾಯಣ ತರಾತುರಿಯ ಸ್ಪಷ್ಟೀಕರಣ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ(Followup).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎಸ್ಪಿ ನಾರಾಯಣ ಅವರು ನೀಡಿರುವ ಸ್ಪಷ್ಟೀಕರಣದಲ್ಲಿ, “ಭಟ್ಕಳ ಡೈರಿ” ವರದಿಗಾರ ಉದಯ ನಾಯ್ಕ ಅವರು ನಗದು ಇಲ್ಲದೇ ಇರುವುದರಿಂದ ಸ್ಥಳಕ್ಕೆ ಬಂದ ಪರಿಚಯಸ್ಥ ವಿನಾಯಕ ಮಾರುತಿ ಶೇಟ ಎಂಬುವವರಿಗೆ ಫೋನ್‌ ಪೇ ಮಾಡಿದ್ದು, ವಿನಾಯಕ ಮಾರುತಿ ಶೇಟ ಅವರು ದಂಡದ ರೂಪದಲ್ಲಿ ಪಿಎಸ್‌ಐ ಅವರಿಗೆ ನಗದು ನೀಡಿದ್ದಾರೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ, “ಭಟ್ಕಳ ಡೈರಿ” ವರದಿಗಾರ ದಂಡ ತುಂಬುವ ವೇಳೆ ವಿನಾಯಕ ಮಾರುತಿ ಶೇಟ ಎಂಬುವವರು ಸ್ಥಳದಲ್ಲಿಯೇ ಇರಲಿಲ್ಲ. ಪಿಎಸ್‌ಐ ಅವರೇ ನೀಡಿದ ಮೊಬೈಲ್‌ ನಂಬರಿಗೆ “ಭಟ್ಕಳ ಡೈರಿ” ವರದಿಗಾರ ದಂಡದ ಹಣ ವರ್ಗಾಯಿಸಿದ್ದಾರೆಯೇ ವಿನಃ ಭಟ್ಕಳ ಡೈರಿ ವರದಿಗಾರ ಅವರ ನಂಬರಿಗೆ ಕಳುಹಿಸುವುದಾಗಿ ತಿಳಿಸಿಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ : Reality check/ ಪೊಲೀಸ್ ಇಲಾಖೆ ಸಂಗ್ರಹಿಸಿದ ದಂಡದ ಮೊತ್ತ ಚಿನ್ನದ ವ್ಯಾಪಾರಿ ಖಾತೆಗೆ !?

ಮೊಬೈಲ್‌ ಹ್ಯಾಂಗ್‌ ಆಗುತ್ತಿದ್ದು, ಹಣ ವರ್ಗಾಯಿಸಲು ಪಿಎಸೈ ಕೊಟ್ಟ ನಂಬರ್‌ ಹೊಂದಿದವರು ಪರಿಚಯಸ್ಥನದ್ದಾಗಿರುವುದರಿಂದ ಆಮೇಲೆ ಅವರ ನಂಬರಿಗೆ ಹಣ ವರ್ಗಾಯಿಸುವುದಾಗಿ ಭಟ್ಕಳ ಡೈರಿ ವರದಿಗಾರ ವಿನಂತಿಸಿಕೊಂಡಿದ್ದಾರೆ. ಆಗ ಪಿಎಸೈ ಆ ನಂಬರಿಗೆ ಫೋನ್‌ ಮಾಡಿದ್ದಾರೆ, ಆದರೆ ಅಲ್ಲಿಂದ ಕರೆ ಸ್ವೀಕರಿಸಿರಲಿಲ್ಲ. ಆ ನಂತರ ಹಣ ವರ್ಗಾಯಿಸುವುದಾಗಿ ಹೇಳಿ ಭಟ್ಕಳ ಡೈರಿ ವರದಿಗಾರ ಉದಯ ನಾಯ್ಕ ಅಲ್ಲಿಂದ ಮನೆಗೆ ಬಂದಿದ್ದಾರೆ. ಮೊಬೈಲ್‌ ಸರಿಯಾದ ನಂತರ ಹಣ ವರ್ಗಾಯಿಸಲು ಕೊಟ್ಟ ನಂಬರಿಗೆ ಫೋನ್‌ ಮಾಡಿ ಹಣ ವರ್ಗಾಯಿಸುತ್ತಿರುವುದಾಗಿ ಕರೆ ಮಾಡಿ ಹೇಳಿ, ಹಣವನ್ನು ಕಳುಹಿಸಿದ್ದಾರೆ. ಹಣ ವರ್ಗಾವಣೆ ಆದ ನಂತರ ಪಿಎಸ್‌ಐ ಯಲ್ಲಪ್ಪ ಅವರಿಗೂ ಫೋನ್‌ ಮಾಡಿ ವಿಷಯ ತಿಳಿಸಿದ್ದಾರೆ. ಹಾಗಿದ್ದ ಮೇಲೆ ಎಸ್ಪಿ ಅವರು ಪ್ರಾಥಮಿಕ ತನಿಖೆಯ ಯಾವ ಅಂಶದ ಮೇಲೆ ಈ ಸ್ಪಷ್ಟೀಕರಣ ನೀಡಿದ್ದಾರೆ ಎಂಬುದು ಉಲ್ಲೇಖಿಸಿಲ್ಲ. ಯಲ್ಲಪ್ಪ ಅವರು ನೀಡಿದ ಹೇಳಿಕೆ ಆಧಾರದ ಮೇಲೋ ಅಥವಾ ಹಣ ವರ್ಗಾವಣೆ ಆದ ವ್ಯಕ್ತಿಯ ಹೇಳಿಕೆಯ ಆಧಾರದ ಮೇಲೆ ಸ್ಪಷ್ಟೀಕರಣ ನೀಡಿದ್ದಾರೋ ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ : ತಲೆನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವು

ಬಾಡಿ ಕ್ಯಾಮರಾ ಇತ್ತಾ? : ನಿನ್ನೆ ಶನಿವಾರ ಮಧ್ಯಾಹ್ನ ಭಟ್ಕಳ ಡೈರಿ ನಡೆಸಿದ ಈ ರಿಯಾಲಿಟಿ ಚೆಕ್‌ ವರದಿ ಪ್ರಕಟಿಸಿದ ನಂತರ ಹಲವಾರು ಮಾಧ್ಯಮಗಳಲ್ಲಿ ಈ ಪ್ರಕರಣದ ವರದಿ ಪ್ರಕಟಗೊಂಡಿದೆ.  ಅಂತಹ ಮಾಧ್ಯಮವೊಂದರಲ್ಲಿ ಭಟ್ಕಳ ಡಿವೈಎಸ್ಪಿ ಹೇಳಿಕೆ ಉಲ್ಲೇಖಿಸಿ ವರದಿ ಮಾಡಲಾಗಿದ್ದು, ಪೊಲೀಸ್‌ ಅಧಿಕಾರಿ ಬಾಡಿ ಕ್ಯಾಮರಾ ಹೊಂದಿರುವುದರಿಂದ ತಪ್ಪೆಸಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಈ ಬಾಡಿ ಕ್ಯಾಮರಾ ತಪಾಸಣೆ ನಡೆಸಿದರೆ, ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿನ ಲೋಪ ಅರಿವಾಗುತ್ತದೆ. ಅಲ್ಲದೆ, ಅದೇ ವೇಳೆ ನಾಲ್ಕೈದು ಜನರ ಹಣವನ್ನೂ ಪಿಎಸೈ ಕೊಟ್ಟ ಅದೇ ನಂಬರಿಗೆ ವರ್ಗಾಯಿಸಲಾಗಿದೆ. ಹಾಗಾದರೆ, ಅವರೆಲ್ಲರೂ ಚಿನ್ನದ ವ್ಯಾಪಾರಿಗೆ ಪರಿಚಯಸ್ಥರೇ ಎಂಬ ಪ್ರಶ್ನೆ ಮೂಡುತ್ತದೆ(Followup).

ಇದನ್ನೂ ಓದಿ : ಕದಂಬ ನೌಕಾನೆಲೆಯ ನಿವೃತ್ತ ನೌಕರ ನಾಪತ್ತೆ

ಓದುಗರಿಂದ ಶ್ಲಾಘನೆ : ನಿನ್ನೆ ಮಧ್ಯಾಹ್ನ ಭಟ್ಕಳ ಡೈರಿ ವರದಿ ಪ್ರಕಟಿಸುತ್ತಿದ್ದಂತೆ ಓದುಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಹಲವಾರು ಓದುಗರು ಕರೆ ಮಾಡಿ, ರಿಯಾಲಿಟಿ ಚೆಕ್‌ ವರದಿಗೆ ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ನಮಗೂ ಇಂತಹ ಅನುಭವವಾಗಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದರೆ ಮಾತ್ರ ಇಲಾಖೆಗೆ, ರಾಜ್ಯ ಸರ್ಕಾದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಭರಣ ಮಾಡಿಕೊಳ್ಳಲು ಸಾಧ್ಯ. ಪೊಲೀಸ್‌ ಅಧೀಕ್ಷಕರು ಇದನ್ನು ಗಂಭೀರವಾಗಿ ಪರಿಗಣಿಸಲಿ ಎಂಬುದು “ಭಟ್ಕಳ ಡೈರಿ” ವಿನಮ್ರಪೂರ್ವಕ ಮನವಿ.

ರಾತ್ರಿ ಬಂದು ಹಣ ಪಡೆಯುವ ಪಿಎಸೈ? : ಆನ್‌ ಲೈನ್‌ ಮೂಲಕ ಪಾವತಿಯಾಗುವ ದಂಡದ ಮೊತ್ತ ಚಿನ್ನದ ವ್ಯಾಪಾರಿ ನಂಬರಿಗೆ ಹೋಗುತ್ತದೆ. ರಾತ್ರಿ ಬಂದು ಡಿಟೇಲ್ಸ್‌ ಪಡೆಯುವ ಪಿಎಸೈ ನಗದನ್ನು ಚಿನ್ನದ ವ್ಯಾಪಾರಿಯಿಂದ ಪಡೆಯುತ್ತಾರೆ ಎಂದು ಆ ಚಿನ್ನದ ವ್ಯಾಪಾರಿ “ಭಟ್ಕಳ ಡೈರಿ”ಗೆ ತಿಳಿಸಿದ್ದಾರೆ. ದಂಡದ ಹಣವನ್ನು ಡಿಜಿಟಿಲ್‌ ಯುಪಿಐ ಮೂಲಕ ಪಾವತಿಸಿಕೊಳ್ಳುವ ವ್ಯವಸ್ಥೆಯಿದ್ದರೂ ಬೇರೆ ವ್ಯಕ್ತಿಗೆ ಹಣ ವರ್ಗಾಯಿಸುವ ಅವಶ್ಯಕತೆಯಾದರೂ ಏನಿದೆ? ಈ ಕುರಿತು ಕೂಲಂಕುಶವಾಗಿ ವಿಚಾರಣೆ ಮಾಡಿ ವರದಿ ನೀಡಲು ಡಿ.ಎಸ್.ಪಿ. ಭಟ್ಕಳರವರಿಗೆ ಸೂಚಿಸಿದ್ದು, ವರದಿ ಬಂದ ನಂತರ ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಇಲಾಖಾ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಎಂ.ನಾರಾಯಣ ತಿಳಿಸಿದ್ದಾರೆ.

ಎಸ್ಪಿ ಸ್ಪಷ್ಟೀಕರಣದಲ್ಲಿ ಏನಿದೆ?

ದಿನಾಂಕ: ೨೪-೮-೨೦೨೪ ರಂದು ಬೆಳಿಗ್ಗೆ ೧೦-೩೧ ಗಂಟೆಗೆ ಭಟ್ಕಳ ಶಹರ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ಯಲ್ಲಪ್ಪ ಎಚ್ ಎಂ ಪಿ.ಎಸ್ .ಐ ತನಿಖೆ-೦೧ ರವರು ವಾಹನ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ಪ್ರಕರಣ ದಾಖಲಿಸುತ್ತಿರುವ ಸಂದರ್ಭದಲ್ಲಿ, ದ್ವಿ- ಚಕ್ರ ವಾಹನ ಸಂಖ್ಯೆ: ಕೆಎ ೪೭ ಆರ್ ೫೫೧೭ ನೇದರ ಮೇಲೆ ಉದಯ ನಾಯ್ಕ ಈತನು ಹೆಲ್ಮೆಟ್‌ ಇಲ್ಲದೇ ಬರುತ್ತಿರುವುದನ್ನು ನೋಡಿ ತಡೆದು ನಿಲ್ಲಿಸಿ, ಮೋಟಾರು ವಾಹನ ಕಾಯಿದೆ ಪ್ರಕಾರ ಚಲನ್‌ ಸಂಖ್ಯೆ:  K/473/6614/537 RIDING WITHOUT HELMET CHALLAN BY CASH ನೀಡಿ ೫೦೦-೦೦ ದಂಡವನ್ನು ಪಾವತಿಸುವಂತೆ ತಿಳಿಸಿದ್ದು ಇರುತ್ತದೆ. ಉದಯ ನಾಯ್ಕ ಈತನ ಹತ್ತಿರ ನಗದು ಹಣ ಇಲ್ಲದೇ ಇರುವುದರಿಂದ ಆ ವೇಳೆಗೆ ಸದರಿ ಸ್ಥಳಕ್ಕೆ ಬಂದ ವಿನಾಯಕ ಮಾರುತಿ ಶೇಟ್ ಈತನು & ಉದಯ ನಾಯ್ಕ ಇಬ್ಬರೂ ಒಬ್ಬರಿಗೊಬ್ಬರು ಪರಿಚಯಸ್ಥರಿದ್ದು, ಉದಯ ನಾಯ್ಕ ಈತನು ತನ್ನ ಬಳಿ ನಗದು ಇಲ್ಲದಿರುವುದರಿಂದ ವಿನಾಯಕ ಮಾರುತಿ ಶೇಟ್ ಈತನ ಮೊಬೈಲ್ ನಂ: ೭೭೬೦೩೩೯೨೪೪ ನೇದಕ್ಕೆ ಫೋನ್ ಪೇ ಮಾಡಿದನು. ನಂತರ ವಿನಾಯಕ ಮಾರುತಿ ಶೇಟ್ ಈತನು ದಂಡದ ರೂಪದಲ್ಲಿ ನಗದು ೫೦೦-೦೦ ರೂ. ಯಲ್ಲಪ್ಪ ಎಚ್. ಎಂ. ಪಿ.ಎಸ್.ಐ ರವರಿಗೆ ನೀಡಿದ್ದು ಇರುತ್ತದೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ಟ್ರಾಫಿಕ್ ಚಲನ ದಂಡದ ಪಾವತಿಯನ್ನು ಡಿಜಿಟಲ್ ಯುಪಿಐ ಮೂಲಕ ಪಾವತಿಸಿಕೊಳ್ಳುವ ವ್ಯವಸ್ಥೆ ಇದ್ದು, ಆದರೆ ಪಿಎಸ್‌ಐ ರವರು ನೇರವಾಗಿ ದಂಡದ ಹಣವನ್ನು ಯುಪಿಐ ಮೂಲಕ ಸ್ವೀಕರಿಸಿಕೊಳ್ಳದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಈ ಕುರಿತು ಕೂಲಂಕುಶವಾಗಿ ವಿಚಾರಣೆ ಮಾಡಿ ವರದಿ ನೀಡಲು ಡಿ.ಎಸ್.ಪಿ. ಭಟ್ಕಳರವರಿಗೆ ಸೂಚಿಸಿದ್ದು, ವರದಿ ಬಂದ ನಂತರ ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಇಲಾಖಾ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು.

ಸಹಿ/- ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ.