ಭಟ್ಕಳ ಡೈರಿ ವರದಿ
ಪುತ್ತೂರು: ಹದಿನಾಲ್ಕು ವರ್ಷಗಳ ನೃತ್ಯಾಭ್ಯಾಸದ ಫಲವಾಗಿ ಅವನಿ ಕೋಡಿಬೈಲು ಅವರು ಭರತನಾಟ್ಯ ವಿದ್ವತ್ ಅಂತಿಮ ಹಂತದ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ‘ವಿದೂಷಿ ಅವನಿ ಕೋಡಿಬೈಲು’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆ: ಅವನಿ ಅವರು ದೂರದರ್ಶನದ ಚಂದನ ವಾಹಿನಿಯ ಸ್ಥಳೀಯ ಶಾಸ್ತ್ರೀಯ ನೃತ್ಯ ಆಡಿಷನ್ನಲ್ಲಿ ಆಯ್ಕೆಯಾಗಿದ್ದು, ‘ಬಿ’ ಗ್ರೇಡ್ ಕಲಾವಿದೆಯಾಗಿ ಮಾನ್ಯತೆ ಪಡೆದಿದ್ದಾರೆ. ವಿದೂಷಿ ಪ್ರಣತಿ ಚೈತನ್ಯ ಪದ್ಯಾಣ ಅವರಲ್ಲಿ ನೃತ್ಯಾಭ್ಯಾಸ ಮಾಡಿರುವ ಅವನಿ, ಗುರುಗಳ ಮಾರ್ಗದರ್ಶನದಲ್ಲಿ ಭರತನಾಟ್ಯದ ವಿವಿಧ ಆಯಾಮಗಳನ್ನು ಕಲಿತಿದ್ದಾರೆ.
ಕೇರಳದಲ್ಲೂ ನೃತ್ಯಪ್ರಸ್ತುತಿ: ನೃತ್ಯಾಭ್ಯಾಸದ ಅವಧಿಯಲ್ಲಿ ಕರ್ನಾಟಕದ ವಿವಿಧ ಭಾಗಗಳು ಹಾಗೂ ಕೇರಳದಲ್ಲಿ ನೃತ್ಯಪ್ರಸ್ತುತಿಗಳನ್ನು ನೀಡಿ ಅವನಿ ಗಮನ ಸೆಳೆದಿದ್ದಾರೆ. ಸ್ವತಃ ನೃತ್ಯ ಸಂಯೋಜನೆ ಮಾಡಿ ವಿವಿಧ ನೃತ್ಯರೂಪಗಳನ್ನು ಪ್ರದರ್ಶಿಸಿರುವ ಅವರು, ಶಾಸ್ತ್ರೀಯ ನೃತ್ಯದ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ವಿಸ್ತರಿಸಿಕೊಂಡಿದ್ದಾರೆ.
ಸಾಹಿತ್ಯದ ಹಿನ್ನೆಲೆಯ ಕುಟುಂಬ: ಅವನಿ ಅವರು ಪುತ್ತೂರು ಸಮೀಪದ ಕಾನಾವು ಕೋಡಿಬೈಲಿನ ರಾಮಚಂದ್ರ ಕೋಡಿಬೈಲು ಹಾಗೂ ಸಾಹಿತಿ, ಕವಯಿತ್ರಿ ಅಶ್ವಿನಿ ಕೋಡಿಬೈಲು ದಂಪತಿಯ ಪುತ್ರಿ. ಹದಿನಾಲ್ಕು ವರ್ಷಗಳ ನಿರಂತರ ಅಭ್ಯಾಸದ ಬಳಿಕ ದೊರೆತ ಈ ಯಶಸ್ಸು ಅವನಿ ಅವರ ನೃತ್ಯಯಾನದ ಪ್ರಮುಖ ಘಟ್ಟವಾಗಿದೆ. ಮುಂದಿನ ದಿನಗಳಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಗುರಿಯೊಂದಿಗೆ ಅವರು ಮುನ್ನಡೆಯುತ್ತಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಶಿರಾಲಿ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಆರೋಪ: ೨೪ ಗಂಟೆಯೊಳಗೆ ಬಂಧನಕ್ಕೆ ವೈದ್ಯಾಧಿಕಾರಿಗಳ ಆಗ್ರಹ
ಭಟ್ಕಳದಲ್ಲಿ ಕರಾಟೆ ಕ್ರೀಡಾಕೂಟದ ಕಣ ಕಳೆ: ೧೫೦ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಪ್ರದರ್ಶನ




