ಭಟ್ಕಳ ಡೈರಿ ವರದಿ
ಭಟ್ಕಳ: ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಮೃತಪಟ್ಟ ಘಟನೆ ಬಳಿಕ ಕರ್ತವ್ಯ ನಿರತ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉತ್ತರ ಕನ್ನಡ ಶಾಖೆ, ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸಬೇಕು ಎಂದು ಆಗ್ರಹಿಸಿ ಭಟ್ಕಳ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಮಗು ಮೃತಪಟ್ಟ ಬಳಿಕ ಗಲಾಟೆ ಆರೋಪ: ಸಂಘದ ಮನವಿಯ ಪ್ರಕಾರ, ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಕ್ಟೋಬರ್ ೨೬ರಂದು ಸೋನಾರಕೇರಿಯ ಹೇಮಾ ಸತೀಶ ನಾಯ್ಕ ಅವರು ಹೆರಿಗೆಗಾಗಿ ದಾಖಲಾಗಿದ್ದರು. ಅಂದು ಮಧ್ಯಾಹ್ನ ೧.೨೩ಕ್ಕೆ ಸಹಜ ಹೆರಿಗೆಯ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದರು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದು ಎರಡನೇ ಹೆರಿಗೆಯಾಗಿದ್ದು, ಮೊದಲ ಮಗುವೂ ಹೆಣ್ಣಾಗಿತ್ತು. ತಾಯಿ ಮಗುವಿನ ಆರೈಕೆ ಹಾಗೂ ಹಾಲುಣಿಸುವ ವಿಷಯದಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿ ನಿರಂತರವಾಗಿ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿದ್ದರು ಎಂದು ಸಂಘ ತಿಳಿಸಿದೆ.
ಅಕ್ಟೋಬರ್ ೨೮ರಂದು ಬೆಳಗ್ಗೆ ಸುಮಾರು ೧೧.೨೮ಕ್ಕೆ ತಾಯಿ ಹಾಲುಣಿಸುತ್ತಿದ್ದಾಗ ಮಗು ನೀಲಿ ಬಣ್ಣಕ್ಕೆ ತಿರುಗಿದ ಬಗ್ಗೆ ಕರ್ತವ್ಯದಲ್ಲಿದ್ದ ಶುಶ್ರೂಷಕ ಸಿಬ್ಬಂದಿ ಮಕ್ಕಳ ತಜ್ಞರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ವೈದ್ಯರು ಮಗುವನ್ನು ಹೆರಿಗೆ ಕೊಠಡಿಗೆ ಕರೆದೊಯ್ದು ಸಿಪಿಆರ್ ಸೇರಿದಂತೆ ಪುನಶ್ಚೇತನ ಕ್ರಮಗಳನ್ನು ಕೈಗೊಂಡರು. ಸುಮಾರು ೧೧.೪೫ರವರೆಗೆ ಪ್ರಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪ: ಮಗುವಿನ ಸಾವಿನ ವಿಷಯವನ್ನು ಕುಟುಂಬದವರಿಗೆ ತಿಳಿಸಿದ ಬಳಿಕ, ಘಟನೆಯ ಕುರಿತು ಮಾಹಿತಿ ನೀಡಲು ವೈದ್ಯರು ಆಡಳಿತ ವೈದ್ಯಾಧಿಕಾರಿಗಳ ಕೊಠಡಿಗೆ ತೆರಳಿದ್ದರು. ಈ ವೇಳೆ ಸುಮಾರು ೧೦ರಿಂದ ೧೧ ಜನರ ಗುಂಪು ಅಲ್ಲಿಗೆ ಬಂದು ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿತು ಎಂದು ಸಂಘ ದೂರಿದೆ. ಈ ಸಂದರ್ಭದಲ್ಲಿ ಮಕ್ಕಳ ತಜ್ಞರ ಶರ್ಟ್ ಎಳೆದು, ಎಡಭುಜಕ್ಕೆ ಗುದ್ದಿ ಹಲ್ಲೆ ನಡೆಸಲಾಗಿದೆ. ವೈದ್ಯರನ್ನು ರಕ್ಷಿಸಲು ಮುಂದಾದ ಡಾ. ರಾಜೇಶ್ ವಿ. ಅವರಿಗೂ ಬೆದರಿಕೆ ಹಾಕಿ ಹಲ್ಲೆ ನಡೆಸಲಾಗಿದೆ. ಮಹಿಳಾ ವೈದ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಲಾಗಿದೆ. ಅಲ್ಲದೆ, ೨೫ ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿ ಬೆದರಿಕೆ ಹಾಕಲಾಗಿದೆ ಎಂದು ಸಂಘ ದೂರಿದೆ. ಶುಶ್ರೂಷಕ ಸಿಬ್ಬಂದಿ ಹಾಗೂ ಇತರ ಆಸ್ಪತ್ರೆ ಸಿಬ್ಬಂದಿಯ ಮೇಲೂ ನಿಂದನೆ ಮತ್ತು ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿಸಿದೆ.
ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕ: ಘಟನೆಯಿಂದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ಕರ್ತವ್ಯ ನಿರತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಬೇಕು. ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸಬೇಕು. ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉತ್ತರ ಕನ್ನಡ ಶಾಖೆ ಎಚ್ಚರಿಕೆ ನೀಡಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಹಾಲುಣಿಸುವ ವೇಳೆ ನೀಲಿಯಾದ ಮಗು: ಚಿಕಿತ್ಸೆ ಫಲಿಸದೆ ಸಾವು, ವೈದ್ಯರ ಮೇಲೆ ಹಲ್ಲೆ, ನಿರ್ಲಕ್ಷ್ಯ ಆರೋಪ




