ಭಟ್ಕಳ : ಇಲ್ಲಿನ ಸುಪ್ರಸಿದ್ಧ ಮಾರಿಜಾತ್ರೆಯು ಗುರುವಾರ ಸಂಜೆ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಸಾವಿರಾರು ಭಕ್ತರು ಬೃಹತ್‌ ಮೆರವಣಿಗೆಯಲ್ಲಿ ಹೊತ್ತೊಯ್ದು ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆ ಮಾಡುವುದರ ಮೂಲಕ ವಿಜೃಂಭಣೆಯಿಂದ ಸಂಪನ್ನಗೊಂಡಿತು (Mari Jathre ends).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಇಂದು ಗುರುವಾರ ಸಂಜೆ ೪.೩೦ರ ಸುಮಾರಿಗೆ ವಿಸರ್ಜನಾ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸುರಿಯುವ ಮಳೆಯಲ್ಲೇ ಮಾರಿ ಮೂರ್ತಿಯನ್ನು ಮೆರವಣಿಗೆ ಮೂಲಕ ಭಕ್ತರು ತಲೆ ಮೇಲೆ ಹೊತ್ತು ಸಾಗಿದರು. ಸುಮಾರು ೮ ಕಿಮೀ ದೂರದ ಮೆರವಣಿಗೆಯಲ್ಲಿ ಸಾವಿರಾರು ಜನರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಮಾರಿ ಸಾಗುವ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಭಕ್ತರು ನಿಂತು ದೇವಿಯ ದರ್ಶನ ಪಡೆದರು. ಕೊನೆಯಲ್ಲಿ ಜಾಲಿ ಕೋಡಿ ಸಮುದ್ರದಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಮಾರಿ ಮೂರ್ತಿಯ ಅಂಗಾಂಗಳನ್ನು ಬೇರ್ಪಡಿಸಿ ವಿಸರ್ಜನೆ ಮಾಡಲಾಯಿತು.

ಇದನ್ನೂ ಓದಿ : ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ 

ವರ್ಷಂಪ್ರತಿಯಂತೆ ಎರಡು ದಿನಗಳ ಕಾಲ ನಡೆದ ಜಾತ್ರೆಯ ಮೊದಲ ದಿನ ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಭಕ್ತರು ಮಾರಿ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸಿ ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಎರಡನೇ ದಿನ‌‌ ನಗರದ ಭಕ್ತರು‌ ಹಬ್ಬ ಆಚರಿಸಿದರು. ಲಕ್ಷಾಂತರ ಜನರು ಅತ್ಯಂತ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಮಾರಿಯ ದರ್ಶನ ಪಡೆದು ಪುನೀತರಾದರು.

ಇದನ್ನೂ ಓದಿ : ಶರಾವತಿ ನದಿಪಾತ್ರದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ

ಮಾರಿ ಉತ್ಸವ ಮೂರ್ತಿಯನ್ನು ಬುಧವಾರ ಬೆಳಗ್ಗಿನ ಜಾವ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ಆರಂಭಿಸಲಾಗಿತ್ತು. ಊರ-ಪರವೂರ ಭಕ್ತರು ಮಾರಿಗುಡಿಗೆ ಬಂದು ಮಾರಿಯಮ್ಮನಿಗೆ ಹೂವು, ಹಣ್ಣು-ಕಾಯಿ, ತೊಟ್ಟಿಲು, ಹೂವಿನ ಪೇಟ, ಕಣ್ಣು ಇತ್ಯಾದಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ಮಹಿಳೆಯರು ಮಕ್ಕಳು ಮಾರಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ : ಭಟ್ಕಳದ ಸನಿಹ ವಿಮಾನ ನಿಲ್ದಾಣ ಆಗುತ್ತಾ?!