ಭಟ್ಕಳ ಡೈರಿ ವರದಿ

ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಿರುದ್ಧ ದಿಕ್ಕಿನಲ್ಲಿ ಮೋಟಾರ್ ಸೈಕಲ್ ಚಲಾಯಿಸಿದ ಆರೋಪದಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ ೨೭ರಂದು ಮಧ್ಯಾಹ್ನ ಸುಮಾರು ೧೨ ಗಂಟೆಗೆ ಹೊನ್ನಾವರದ ಕರ್ಕಿ ಮಠದಕೇರಿ ಚರ್ಚ್ ಕ್ರಾಸ್ ಸಮೀಪ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಳದಿಪುರದ ಮಹ್ಮದ್ ರಿಜ್ವಾನ್ (೩೨) ಎಂಬವರು ಹೊನ್ನಾವರದಿಂದ ಹಳದಿಪುರ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ತಮ್ಮ ದಿಕ್ಕಿನ ರಸ್ತೆಯಲ್ಲಿ ಸಂಚರಿಸದೆ ಕುಮಟಾದಿಂದ ಹೊನ್ನಾವರ ಕಡೆಗೆ ಬರುವ ಎನ್‌ಎಚ್‌-೬೬ರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬೈಕ್ ಚಲಾಯಿಸಿದ ಆರೋಪ ಕೇಳಿಬಂದಿದೆ. ಈ ವೇಳೆ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಭಟ್ಕಳದ ಕಾಯ್ಕಿಣಿಯ ಅಖಿಲೇಶ ಮಂಜುನಾಥ ಆಚಾರಿ (೨೫) ಅವರ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಡಿಕ್ಕಿಯ ಪರಿಣಾಮ ಕಾರಿಗೆ ಹಾನಿಯಾಗಿದ್ದು, ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾರೆ. ಅವರ ಬಲಕಾಲು ಹಾಗೂ ದೇಹದ ವಿವಿಧೆಡೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಅಖಿಲೇಶ ಆಚಾರಿ ನೀಡಿದ ದೂರಿನ ಆಧಾರದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಮುಂಡಳ್ಳಿಯಲ್ಲಿ ಜಾಗದ ವಿಚಾರಕ್ಕೆ ಗಲಾಟೆ: ಸಾರ್ವಜನಿಕ ರಸ್ತೆ ಬಂದ್ ಮಾಡಿ ಬೆದರಿಕೆ ಆರೋಪ

ಜಾಗದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆ; ವ್ಯಕ್ತಿಗೆ ಹಲ್ಲೆ ಆರೋಪ

ಹಾಲುಣಿಸುವ ವೇಳೆ ನೀಲಿಯಾದ ಮಗು: ಚಿಕಿತ್ಸೆ ಫಲಿಸದೆ ಸಾವು, ವೈದ್ಯರ ಮೇಲೆ ಹಲ್ಲೆ, ನಿರ್ಲಕ್ಷ್ಯ ಆರೋಪ