ಕುಮಟಾ: ಪಟ್ಟಣದ ಮೂರುಕಟ್ಟೆಯಲ್ಲಿರುವ ಶ್ರೀ ಕಾವೂರು ಕಾಮಾಕ್ಷಿ ದೇವಿಯ ಗರ್ಭಗೃಹ ಶಿಖರ ನವೀಕರಣ ಮತ್ತು ಸ್ವರ್ಣ ಕಲಶ ಪ್ರತಿಷ್ಠೆ ಕಾರ್ಯವು ಏ.೨೩ ರಿಂದ ಏ.೨೮ರ ವರೆಗೆ ನಡೆಯಲಿದೆ.

ಇದನ್ನೂ ಓದಿ : ಅಂತಿಮ ಕಣದಲ್ಲಿ ಇರೋ ಅಭ್ಯರ್ಥಿಗಳು ಯಾರು?

ಈ ಧಾರ್ಮಿಕ ಕಾರ್ಯಕ್ರಮವು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಸಾನಿಧ್ಯವಹಿಸಲು ಏ.೨೩ ರಂದು ಸಂಜೆ ಆಗಮಿಸುತ್ತಿರುವ ಶ್ರೀಗಳನ್ನು ಗ್ರಾಮದೇವಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಮಹಾದ್ವಾರ ಬಳಿ ಭಕ್ತರು ಪೂರ್ಣಕುಂಭ ಸ್ವಾಗತ ನೀಡಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರುವರು. ದೇವರ ದರ್ಶನ ಮಾಡಿದ ಶ್ರೀಗಳ ಪಾದಪೂಜೆಯನ್ನು ಶ್ರೀ ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯವರು ನೆರವೇರಿಸುವರು. ನಂತರ ಗುರುಗಳು ಶಿಷ್ಯರಿಗೆ ಅಶೀರ್ವಚನ ನೀಡುವರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಏ.೨೪ ಹಾಗೂ ೨೫ ರಂದು ಶ್ರೀ ದೇವಿಗೆ ಸಂಬಂಧಿಸಿದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಲಹರಿ, ಕೊಂಕಣಿ ನಾಟಕ, ದುರ್ಗಾ ನಮಸ್ಕಾರ, ದೀಪೋತ್ಸವ ಸೇವೆ, ಭಜನಾಮೃತ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ಏ.೨೬ ರಂದು ಬೆಳಿಗ್ಗೆ ೧೧.೧೨ರ ಸುಮೂಹೂರ್ತದಲ್ಲಿ ಪೂಜ್ಯ ಶ್ರೀಗಳ ಅಮೃತ ಹಸ್ತದಿಂದ ಗರ್ಭಗೃಹ ಶಿಖರ ಕಲಶದ ಪ್ರತಿಷ್ಠೆ ನೆರವೇರಲಿದೆ. ಮಧ್ಯಾಹ್ನ ಮಹಾಪೂರ್ಣಾಹುತಿ, ಮಹಾ ಮಂಗಳಾರತಿ, ಗುರು ಭಿಕ್ಷಾ ಸೇವೆ, ಮಹಾಸಂತರ್ಪಣೆ, ಬ್ರಾಹ್ಮಣ ಆಶೀರ್ವಚನ ನಡೆಯುವುದು. ಸಂಜೆ ೫.೩೦ಕ್ಕೆ ಗುರುಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗುವುದು.

ಏ.೨೭ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ೪.೩೦ಕ್ಕೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಜರುಗುವುದು. ಏ.೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ರಘುನಂದನ ಭಟ್ಟ ಅವರಿಂದ ಸ್ವರಾಮೃತ, ೧೦.೩೦ಕ್ಕೆ ಶ್ರೀಗಳಿಂದ ಶ್ರೀ ಕಾಮಾಕ್ಷಿ ದೇವಿಗೆ ಶತಕಲಶಾಭಿಷೇಕ, ೧೨.೩೦ಕ್ಕೆ ಮಂಗಳಾರತಿ, ಗುರುಭಿಕ್ಷಾ ಸೇವೆ, ಸಂತರ್ಪಣೆಯ ನಂತರ ಮುಂದಿನ ಮುಕ್ಕಾಂಗೆ ಶ್ರೀಗಳನ್ನು ಬೀಳ್ಕೊಡಲಿದ್ದಾರೆ.