ಭಟ್ಕಳ : “ತಿಂಗಳ ಬೆಳಕು” – ಭಟ್ಕಳದ ಭಾವಕವಿ ಉಮೇಶ ಮುಂಡಳ್ಳಿ ಅವರ ಕವನ ಸಂಕಲನ. ಈ ಕೃತಿಯ ಬಗ್ಗೆ ಹಿರಿಯ ಸಾಹಿತಿ ವಿ.ಗ.ನಾಯಕ ಪುಟ್ಟ ವಿಮರ್ಶೆ ಮಾಡಿ ಅವರನ್ನು ಹುರಿದುಂಬಿಸಿದ್ದಾರೆ. ಅದರ ಸಂಪೂರ್ಣ ಪಾಠ ಇಲ್ಲಿದೆ…
ಇದನ್ನೂ ಓದಿ : ಕರಾವಳಿ ಜನರ ಬಗ್ಗೆ ಪ್ರಧಾನಿ ಅಭಿಮಾನದ ಟ್ವೀಟ್
ತಿಂಗಳ ಬೆಳಕು” ಕವಿ ಉಮೇಶ,
ನಿಮ್ಮ “ಮೌನದೊಳಗಿನ ಮಾತು” ಓದಿದೆ.
ನಿಮಗೆ ಆ ರೀತಿ ಪ್ರೀತಿ.
ಹಾಗೆಂದೇ ಅದರ ಕುರಿತು ಮಾತು ಮೌನದೊಳಗಿದೆ.ನನ್ನ ಮಾತು ಮೌನದೊಳಗಿದೆ.
ಆದರೆ ನಿಮ್ಮ ” ತಿಂಗಳ ಬೆಳಕು ” ಮಾತ್ರ ಮೌನದೊಳಗಿರಲು ಬಿಡುವುದಿಲ್ಲ.ಬಿಡಲಿಲ್ಲ.
ಕವಿ ಸಾನಾನ್ಯನಲ್ಲ. ಸಾಮಾನ್ಯ ಸಂಗತಿಗಳಿಗೆ ತಲೆ ಕೊಡುವುದಿಲ್ಲ. ಲೋಕದ ಎಲ್ಲೆಡೆಯೂ ಓಡಾಡುತ್ತಾನೆ. ಒಳಗೊಳಗೆ ಹೊಕ್ಕುತ್ತಾನೆ.ಯಾವುದು ವಂದ್ಯ, ಯಾವುದು ನಿಂದ್ಯ – ಅವುಗಳನ್ನು ಹೆಕ್ಕುತ್ತಾನೆ.. ಅನಂತರ ಒಂದೊಂದನ್ನೂ ಕಣ್ಣ ಮುಂದಿಡುತ್ತಾನೆ.
ಕನ್ನಡದಲ್ಲಿ ಹನಿಗವನ ಪ್ರಕಾರ ಕೂಡ ಸ್ಥಾನ – ಮಾನ ಪಡೆದಿದೆ. ಇಲ್ಲಿ ಒಂದೇ ವಸ್ತುವನ್ನು ಪ್ರಧಾನವಾಗಿಸಿಕೊಂಡು ಕೆಲವಾರು, ಹಲವಾರು ಕವನಗಳನ್ನು ರಚಿಸಲಾಗಿದೆ.
ಶಾ.ಬಾಲುರಾವ್, ಮಳಲಿ ವಸಂತಕುಮಾರ, ಗುಂಡ್ಮಿ ಚಂದ್ರಶೇಖರ ಐತಾಳ, ಅಮೃತ ಸೋಮೇಶ್ವರ, ವೈದೇಹಿ, ವಿ.ಗ.ನಾಯಕ ಮೊದಲಾದವರು ಹತ್ತಿಪ್ಪತ್ತೋ,ಐವತ್ತೋ, ನೂರೋ ನೋಟಗಳನ್ನು ಕೊಡಮಾಡಿದ್ದಾರೆ. ಇದೀಗ ನೀವು ಅವರ ಸಾಲಿನಲ್ಲಿ ಕಾಣಿಸಿಕೊಂಡಿದ್ದೀರಿ. “ತಿಂಗಳ ಬೆಳಕು” ಅಲ್ಲಿ ಚಂದ್ರನನ್ನು – ಅವನ ಆಟೋಟ ಮಾಟಗಳನ್ನು ನೂರು ರೀತಿಯಲ್ಲಿ ಹಿಡಿದು ಕೊಟ್ಟಿದ್ದೀರಿ.
ಸಂಕಲನದಲ್ಲಿನ ೧, ೨, ೪, ೭, ೧೦, ೧೨, ೧೩, ೧೪, ೧೭, ೧೮, ೧೯, ೨೦, ೨೧, ೨೨, ೨೫, ೨೬, ೨೭, ೨೮ ,೩೦, ೩೧, ೩೨ ,೩೩, ೩೯, ೪೯, ೪೯ ,೫೪, ೫೭, ೬೧, ೬೨ ,೬೪, ೬೫, ೬೮, ೭೩, ೭೪, ೭೬, ೭೭,೮೦, ೮೨, ೮೧, ೮೩, ೮೬ ,೮೮, ೮೯, ೯೦, ೯೧, ೯೭, ೯೯, ೧೦೦ – ಇಷ್ಟು ರಚನೆಗಳು ಅಲ್ಲ ಕವನಗಳು ಹೆಚ್ಚು ಅಚ್ಚು ಮೆಚ್ಚಾದವು.
ಇನ್ನುಳಿದವು ಅಲ್ಲ, ಅಲ್ಲ ಅಂತಲ್ಲ. ಆದರೂ ಸೋತಂತಿವೆ ಅಲ್ಲವೇ? ಹೀಗೂ ಅಂದುಕೊಳ್ಳುತ್ತಿದ್ದೇನೆಯೇ? ಏನು ಆಗಬೇಕಿತ್ತು ಎಂದರೆ.ರಚನೆಗಳ ಮರು ಓದು, ಮರು ಓದು. ಆವಾಗ ಎಷ್ಟೋ ರಚನೆಗಳಿಗೆ ರೂಪಾಂತರಗಳು, ಪುನರ್ಜನ್ಮಗಳು ಪ್ರಾಪ್ತವಾಗಿಬಿಡುತ್ತಿದ್ದವು.
(ನಾನು ” ಗೋಲಗುಮ್ಮಟ” ದಲ್ಲಿ ೬೮, ” ನೆಲಗುಮ್ಮ ” ದಲ್ಲಿ ೧೦೦ ಹಾಕಿಕೊಂಡಿದ್ದೇನೆ. ಹೆಚ್ಚೇ ಬರೆದಿದ್ದೆ. ಮತ್ತೆ, ಮತ್ತೆ ಓದಿದಾಗ ಏನಾಯಿತು? ಎಷ್ಟೋ ಬೇಡವಾಯಿತು. ಬಿಟ್ಟು ಬಿಟ್ಟೆ)
ಹೌದು ” ತಿಂಗಳ ಬೆಳಕು ” ಗಮನಾರ್ಹವಾದ ಸಂಕಲನವಾಗಿದೆ. ಅಲ್ಲಲ್ಲಿ ಪ್ರತಿಭೆ ಪ್ರವೇಶಿಸಿದೆ. ಕೆಲವಾರು ರಚನೆಗಳಲ್ಲಿ ವಿಶೇಷತೆ, ವಿಶಿಷ್ಟತೆಗಳಿವೆ, ವೈವಿಧ್ಯ, ವೈಚಿತ್ರ್ಯಗಳೂ ಇವೆ.
ಇನ್ನಷ್ಟು, ಮತ್ತಷ್ಡು ಬೆಳೆಯಿರಿ, ಬೆಳಗಿರಿ.
ನಿಮ್ಮ
ವಿ.ಗ.ನಾಯಕ
೧೦-೧-೨೦೨೪
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.