ಗೋಕರ್ಣ : ನಮ್ಮ ವಿರುದ್ಧ ಹೋರಾಟ ಮಾಡಿದ, ಬಿಜೆಪಿಗೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿ, ಹೊಸಮುಖಗಳನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?

ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಬುಧವಾರ ಪೂಜೆ ಸಲ್ಲಿಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ದಳದವರು ಆರಂಭದಲ್ಲೇ ಎಡವಿದ್ದಾರೆ. ಆ ಪಕ್ಷದಲ್ಲಿ ಜಾತ್ಯತೀತ ತತ್ವ ಇಲ್ಲವಾಗಿದೆ. ಅಲ್ಲಿ ಪಕ್ಷದ ವಿಚಾರವೇ ಇಲ್ಲ. ಅವರ ಕುಟಂಬದ ಸದಸ್ಯರನ್ನು ಬೇರೆ ಪಕ್ಷದಿಂದ ಕಣಕ್ಕಿಳಿಸಿದ ಮೇಲೆ ಜೆಡಿಎಸ್ ಇದೆ ಎಂದು ಹೇಳಲು ಸಾಧ್ಯವೇ? ಇನ್ನು ಬಿಜೆಪಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನಾನು ಹೇಳುವ ಅಗತ್ಯವಿಲ್ಲ. ಅಲ್ಲಿ ಪಕ್ಷದ ಮಾಜಿ ಅಧ್ಯಕ್ಷರು, ಮಾಜಿ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್ ಇಲ್ಲವಾಗಿದೆ. ಬಿಜೆಪಿಗೆ ಅಡಿಪಾಯ ಹಾಕಿದವರಿಗೆ, ರಾಜ್ಯ ಪ್ರವಾಸ ಮಾಡಿದವರಿಗೆ, ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಮನೆಗೆ ಕಳಿಸಿ ಹೊಸಬರನ್ನು ಕಣಕ್ಕಿಳಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಡಿ ಕೆ ಶಿವಕುಮಾರ್, ನಿಂಬಾಳ್ಕರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ದೇವಾಲಯದ ಅರ್ಚಕರು ತಾವು ಸಿಎಂ ಆಗಬೇಕು ಎಂದು ಪೂಜೆ ಮಾಡಿದ್ದಾರೆ ಎಂದು ಕೇಳಿದಾಗ, ಅರ್ಚಕರು ಕೇಳುವುದರಲ್ಲಿ ತಪ್ಪೇನಿದೆ. ಅವರ ಆಸೆ ಅವರು ಕೇಳಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಳಗೆ ಉಪಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಯಾರು ಏನೇ ಆಸೆ ಪಟ್ಟರೂ ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿದೆ. ಈಗ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರಾಜ್ಯ ಪ್ರಗತಿ ಸಾಧಿಸಲಿ ಎಂಬುದು ನಮ್ಮ ಆಸೆ. ನಮ್ಮ ಅಭಿಮಾನಿಗಳು ಕೇಳಿದಾಗ ಅವರ ಬಾಯಿ ಮುಚ್ಚಿಸಲು ಆಗುವುದಿಲ್ಲ ಎಂದರು.

ಬ್ರೇಕಿಂಗ್ ನ್ಯೂಸ್ ವಿಡಿಯೋ ನೋಡಿ : ಕುಮಟಾದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ

ಕೇಂದ್ರ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದವರ ವಿರುದ್ಧ ಐಟಿ, ಇಡಿ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಚುನಾವಣೆ ಸಮಯ. ಪ್ರಕೃತಿ ನಿಯಮ ಹಾಗೂ ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ಡಿ.ಕೆ. ಶಿವಕುಮಾರ್, ಕೇಜ್ರಿವಾಲ್ ಪ್ರಕರಣ ಸೇರಿದಂತೆ ಏನೆಲ್ಲಾ ನಡೆಯುತ್ತಿದೆ ಎಂದು ಜನ ನೋಡುತ್ತಿದ್ದಾರೆ. ಅವರೇ ಉತ್ತರ ನೀಡಲಿದ್ದಾರೆ ಎಂದರು.

ಉತ್ತರ ಕನ್ನಡದಲ್ಲಿ ಹಿಂದುತ್ವ, ರಾಮ ಮಂದಿರ, ಬಿಜೆಪಿ ಅಲೆ ಇಲ್ಲ. ಹೀಗಾಗಿ ಬಿಜೆಪಿ ಗ್ಯಾರಂಟಿ ಎಂದು ಹೇಳುವ ಬದಲು ಮೋದಿ ಗ್ಯಾರಂಟಿ. ಅವರ ಸಂದೇಶ ಏನೂ ಇಲ್ಲ, ಸಮಾನತೆಯೂ ಇಲ್ಲ. ಹೋರಾಟ ಮಾಡಿದವರಿಗೆ ವಿಶ್ರಾಂತಿ ಪಡೆಯಿರಿ ಎಂದು ಮನೆಯಲ್ಲಿ ಕೂರಿಸಿದ್ದಾರೆ ಎಂದು ತಿಳಿಸಿದರು.
ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತವಾದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಯಾರನ್ನೂ ವಿರೋಧ ಮಾಡುವ ಪ್ರಶ್ನೆ ಇಲ್ಲ. ಪಕ್ಷ ತೀರ್ಮಾನದ ವಿರುದ್ಧ ವಿರೋಧಿಸುವಂತಿಲ್ಲ ಎಂದು ವಿರೋಧಿಸುವವರಿಗೆ ಸಂದೇಶ ನೀಡಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನಮ್ಮ ಚುನಾವಣಾ ಪ್ರಚಾರ ಕೂಡ ಆರಂಭಿಸುತ್ತಿದ್ದೇವೆ. ಹೀಗಾಗಿ ನಿನ್ನೆ ಧರ್ಮಸ್ಥಳ, ಶೃಂಗೇರಿ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕೆ, ಇಡುಗುಂಜಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೆ. ಇಂದು ಗೋಕರ್ಣದಲ್ಲಿ ಪೂಜೆ ಸಲ್ಲಿಸಿ ಮೈಸೂರಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದರು.