ಭಟ್ಕಳ: ಶಿಕ್ಷಕರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಕಾರ್ಯ ಮಾಡಬೇಕು ಎಂದು ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಹೇಳಿದರು.
ಅವರು ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಭಟ್ಕಳ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಟ್ಕಳ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ಮತ್ತು ಶೈಕ್ಷಣಿಕ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಭಟ್ಕಳದಲ್ಲಿ ಕ್ಯಾನ್ಸರ್ ಅರಿವು ಕಾರ್ಯಕ್ರಮ
ಹಿಂದೆ ಶಿಕ್ಷಕರಾಗುವ ಅವಕಾಶ ಸುಲಭವಾಗಿ ದೊರೆಯುತ್ತಿದ್ದರೆ ಇಂದು ಶಿಕ್ಷಕರಾಗುವ ಕೆಲಸ ತುಂಬಾ ಸ್ಪರ್ಧಾತ್ಮಕವಾಗಿದೆ. ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಶಿಕ್ಷಕರಾಗುವ ನೀವು ಇದೇ ವೃತ್ತಿಯಲ್ಲಿ ತೃಪ್ತಿ ಕಂಡರೂ ಬೇರೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ದೇಶ ಸೇವೆಯತ್ತ ಕೂಡಾ ಮುಖ ಮಾಡುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ಉಮೇಶ ಮುಂಡಳ್ಳಿ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಟ್ಕಳ ಶಾಖೆಯ ಅಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ, ಅನೇಕ ಜಟಿಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸರಕಾರ ವಿವಿಧ ಕಾರ್ಯಗಳನ್ನು ಶಿಕ್ಷಕರಿಗೆ ವಹಿಸುವುದನ್ನು ಕೂಡಾ ನಮ್ಮ ಹೋರಾಟದ ಫಲವಾಗಿ ಕಡಿಮೆಗೊಳಿಸಿದೆ ಎಂದ ಅವರು, ಚುನಾವಣಾ ಕಾರ್ಯದಲ್ಲಿಯೂ ಶಿಕ್ಷಕರನ್ನೇ ಅವಲಂಬಿಸುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ ಎಂದರು.
ಇದನ್ನೂ ಓದಿ: ದೈಹಿಕ ಶಿಕ್ಷಣ ಶೈಕ್ಷಣಿಕ ಕಾರ್ಯಾಗಾರ ಸಂಪನ್ನ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಗುರು ವಿದ್ಯಾಧಿರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶ್ಯಾನುಭಾಗ, ಕುಮಟಾ ಡಯಟ್ನ ಸಂತೋಷ ಶ್ರೇಷ್ಟಿ, ಆನಂದ ಆಶ್ರಮ ಕಾನ್ವೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿನುತಾ, ಸೈಂಟ್ ಥಾಮಸ್ ಪ್ರೌಢ ಶಾಲೆ ಶಿರಾಲಿಯ ಶಿಕ್ಷಕಿ ನೇಹಾ ಸಿಜೊ, ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣಿಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಡಿ.ರಫೀಕ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಭಟ್ಕಳದಲ್ಲಿ 2 ಪಲ್ಲಕ್ಕಿ ಬಸ್ಗಳಿಗೆ ಚಾಲನೆ