ಭಟ್ಕಳ: ಕಾನೂನು ಸೇವಾ ಸಮಿತಿ ಭಟ್ಕಳ, ವಕೀಲರ ಸಂಘ ಭಟ್ಕಳ, ಅಭಿಯೋಜನಾ ಇಲಾಖೆ ಭಟ್ಕಳ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಇದನ್ನೂ ಓದಿ : ಹೆಸರಾಂತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ನಾಡಿನ ಸಂಪತ್ತಾದ ಕಾಡನ್ನು ಸಹ ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಕಾದಿಡುವ ಕಾರ್ಯವನ್ನು ಮಾಡಬೇಕಾಗಿದೆ. ನಾವು ಉಪಯೋಗಿಸುವ ಪ್ರತಿಯೊಂದು ಪಕೃತಿದತ್ತವಾದ ಸಂಪತ್ತು ಕೂಡ ಅಮೂಲ್ಯವಾಗಿದೆ. ಮಿತವಾಗಿ ಉಪಯೋಗಿಸುವತ್ತ ಗಮನ ಹರಿಸಬೇಕಾಗಿದೆ ಎಂದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹಿರಿಯ ನ್ಯಾಯವಾದಿ ಹಾಗೂ ನೋಟರಿ ಆರ್.ಆರ್.ಶ್ರೇಷ್ಠಿಯವರು ಮಾತನಾಡಿ, ಭೂಮಿಯನ್ನು ನಾವು ಪ್ಲಾಸ್ಟಿಕ್ ಮಯ ಮಾಡುತ್ತಿರುವುದರಿಂದ ಪರಿಸರದ ಮೇಲೆ ದುಷ್ಫರಿಣಾಮ ಬೀರುತ್ತಿದ್ದೇವೆ. ಇದರ ಬಗ್ಗೆ ನಾವು ಗಮನ ಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದರು. ನಾವು ಇಂದು ನಮ್ಮ ಗಮನವನ್ನು ಬೇರೆ ಬೇರೆ ಕಡೆಗೆ ಹರಿಸುವುದರಿಂದ ಪ್ರಕೃತಿಯ ಬಗೆಗೆ ಗಮನ ಹರಿಸುವುದನ್ನೇ ಮರೆತಿದ್ದೇವೆ. ಹೀಗೆ ಆದರೆ ಮುಂದಿನ ದಿನ ಬಹು ಕಠಿಣವಾಗಬಹುದು ಎಂದೂ ಅವರು ಎಚ್ಚರಿಸಿದರು.
ವಿಶ್ವ ಭೂಮಿ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ. ದೇವಾಡಿಗ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಧನವತಿ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ನಾಯ್ಕ, ವಕೀಲರ ಸಂಘದ ಕಾರ್ಯದರ್ಶಿ ನಾಗರಾಜ ನಾಯ್ಕ ಉಪಸ್ಥಿತರಿದ್ದರು. ನ್ಯಾಯಾಲಯದ ಸಿಬ್ಬಂದಿ ಪ್ರಜ್ವಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.