ಭಟ್ಕಳ : ಇಲ್ಲಿನ ಹಿಂದೂ ಕಾರ್ಯಕರ್ತ ಹನುಮಾನ್ ನಗರದ ಶ್ರೀನಿವಾಸ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ : ಮೆಗಾ ಉದ್ಯೋಗ ಸಂದರ್ಶನ ೪ರಂದು
ಜಿಲ್ಲಾ ದಂಡಾಧಿಕಾರಿರವರ ನ್ಯಾಯಾಲಯದಲ್ಲಿ ಏ.೪ರಂದು ಮಧ್ಯಾಹ್ನ ೩ ಗಂಟೆಗೆ ಪ್ರಕರಣದ ವಿಚಾರಣೆ ನಿಗದಿಪಡಿಸಲಾಗಿದೆ. ನ್ಯಾಯಾಲಯಕ್ಕೆ ನೀವು ಖುದ್ದಾಗಿ ಹಾಜರಾಗಲು ಅಥವಾ ವಕೀಲರ ಮೂಲಕ ಪೊಲೀಸ್ ಅಧೀಕ್ಷಕರ ವರದಿಯಲ್ಲಿನ ಆಪಾದನೆಗೆ ಸಮಜಾಯಿಷಿ ನೀಡುವಂತೆ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿದ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಜಿಲ್ಲಾಧಿಕಾರಿಯವರ ನೋಟಿಸ್ ಹಿನ್ಮೆಲೆ ಭಟ್ಕಳ ತಹಶೀಲ್ದಾರರು ಏ.೧ರಂದು ಶಹರ ಠಾಣೆಯ ಉಪ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಹೊರಡಿಸಿದ ನೋಟಿಸನ್ನು ಸಂಬಂಧಪಟ್ಟವರಿಗೆ ಜಾರಿ ಮಾಡಿ, ಎರಡು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಯಾರಿವರು ಶ್ರೀನಿವಾಸ ನಾಯ್ಕ?
ಭಟ್ಕಳ ಶಹರದ ಹನುಮಾನ ನಗರ ನಿವಾಸಿಯಾಗಿರುವ ಶ್ರೀನಿವಾಸ ನಾಯ್ಕ(೩೪) ಹಿಂದೂ ಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತ. ಹಿಂದೂ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇತ್ತೀಚೆಗೆ ನಡೆದ ತೆಂಗಿನಗುಂಡಿ ಧ್ವಜ ಪ್ರಕರಣ, ೨೦೧೭ರಲ್ಲಿ ಪುರಸಭೆಯ ಅಂಗಡಿ ತೆರವು ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಗಲಾಟೆ ಸಹಿತ ಐದು ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ.
ಗಡಿಪಾರಿಗೆ ಕಾರಣವೇನು ?
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶ್ರೀನಿವಾಸ ನಾಯ್ಕ ಅವರನ್ನು ಗಡಿಪಾರು ಮಾಡುವ ಬಗ್ಗೆ ಕಳೆದ ಮಾ.೧೮ರಂದು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಮರುದಿನವೇ ಮಾ.೧೯ರಂದು ಜಿಲ್ಲಾಧಿಕಾರಿಯವರು ಶ್ರೀನಿವಾಸ ನಾಯ್ಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಶ್ರೀನಿವಾಸ ನಾಯ್ಕ ವಿರುದ್ಧ ಐದು ಕ್ರಮಿನಲ್ ಪ್ರಕರಣ ದಾಖಲಾಗಿದ್ದವು. ಈ ಪೈಕಿ ಮೂರರಲ್ಲಿ ಖುಲಾಸೆಯಾಗಿದ್ದಾರೆ. ಒಂದು ಪ್ರಕರಣ ನ್ಯಾಯಾಲಯದಲ್ಲಿದ್ದರೆ, ಇನ್ನೊಂದು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇದಲ್ಲದೆ ನಾಲ್ಕು ಬಾರಿ ಪ್ರತಿಬಂಧಕ ಕಾನೂನಿನಡಿ ತಹಶೀಲ್ದಾರರು ಕ್ರಮ ಕೈಗೊಂಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದಂತೆ ಹಲವಾರು ಬಾರಿ ಎಚ್ಚರಿಕೆ ನೀಡಿ ಸೂಚಿಸಿದ್ದಾಗ್ಯೂ ಪ್ರಯೋಜನವಾಗಿಲ್ಲ. ಭಟ್ಕಳ ಮತೀಯವಾಗಿ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಇವರ ಕಾನೂನು ಬಾಹಿರ ಚಟುವಟಿಕೆಯಿಂದ
ಮುಂದಿನ ದಿನಗಳಲ್ಲಿ ಕೋಮು ಗಲಭೆಯಂತಹ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಇವರ ಕೃತ್ಯದಿಂದ ಭಟ್ಕಳ ನಗರದಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ, ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ, ಸಮಾಜದಲ್ಲಿ ರೌಡಿ ಚಟುವಟಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇವರನ್ನು ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಒಂದು ವರ್ಷ ಕಾಲ ಗಡಿಪಾರು ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಯವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಹಿಂದು ಪರ ಮುಖಂಡರ ಆಕ್ರೋಶ
ಶ್ರೀನಿವಾಸ ನಾಯ್ಕರಿಗೆ ಗಡಿಪಾರು ನೋಟಿಸ್ ಜಾರಿಗೊಳಿಸಿರುವ ಬಗ್ಗೆ ಹಿಂದ ಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ತಮ್ಮ ಅಮೂಲ್ಯ ಸಮಯ ನೀಡುತ್ತಾ ಬಂದಿರುವ ಭಟ್ಕಳದ ಶ್ರೀನಿವಾಸ ನಾಯ್ಕ ವಿರುದ್ಧ ಗಡಿಪಾರು ಕೇಸು ದಾಖಲಿಸಿದ್ದಾರೆ. ಈ ಹಿಂದೆ ಹಿಂದೂಗಳಿಗೆ ಅನ್ಯಾಯವಾದಾಗ ಹಿಂದೂ ಪರ ಧ್ವನಿ ಎತ್ತಿ ಪೋಲಿಸ್ ಅಧಿಕಾರಿಗಳನ್ನು ಪ್ರಶ್ನೆ ಮಾಡಿರುವುದನ್ನೇ ಪೋಲೀಸ್ ಅಧಿಕಾರಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆಬೆಂದು ಆರೋಪಿಸಿದ್ದಾರೆ. ಗಡಿಪಾರು ಆದೇಶಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಬ್ಬ ಪ್ರಾಮಾಣಿಕ ಹಿಂದೂ ಕಾರ್ಯಕರ್ತನ ಮನೋಸ್ಥೈರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಜೊತೆಗೆ ಉಳಿದಂತಹ ಹಿಂದೂ ಕಾರ್ಯಕರ್ತರ ಮನೋಸ್ಥೈರ್ಯ ಕುಸಿಯುವಂತೆ ಮಾಡುವ ಪೂರ್ವನಿಯೋಜಿತ ಕುತಂತ್ರ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಂದೂರು ಶಾಸಕರ ಖಂಡನೆ
ಶ್ರೀನಿವಾಸ ನಾಯ್ಕ ವಿರುದ್ಧ ಗಡಿಪಾರು ನೋಟಿಸ್ ಜಾರಿ ಮಾಡಿದ್ದನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿರುವ ಸರ್ಕಾರದ ಈ ನಡೆ ಖಂಡನೀಯ ಎಂದು ತಿಳಿಸಿದ್ದಾರೆ. ಸಮಸ್ತ ಹಿಂದೂ ಸಮಾಜ ಶ್ರೀನಿವಾಸ ನಾಯ್ಕ ಅವರ ಬೆಂಬಲಕ್ಕಿದೆ. ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ದುಷ್ಟ ನಿರ್ಧಾರವನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.