ಭಟ್ಕಳ ಡೈರಿ ವರದಿ

ಭಟ್ಕಳ: ಚದುರಂಗದಾಟದಲ್ಲಿ ಭಟ್ಕಳದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಂಲಗ್ನ ಕಾಲೇಜುಗಳ ಅಂತರ ಮಹಾವಿದ್ಯಾಲಯ ಏಕ ವಲಯ ಮಟ್ಟದ ಪುರುಷ ಹಾಗೂ ಮಹಿಳಾ ಚೆಸ್ ಪಂದ್ಯಾವಳಿಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಿತು.

ಪಂದ್ಯಾವಳಿಯನ್ನು ಉದ್ಘಾಟಿಸಿದ ಶಿರಾಲಿಯ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಟ್ರಸ್ಟಿ ಗುರುದತ್ ಶೇಟ್ ಶುಭ ಹಾರೈಸಿದರು.

ಪುರುಷರ ವಿಭಾಗದಲ್ಲಿ ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್ ಕಾಲೇಜು ಪ್ರಥಮ ಸ್ಥಾನ ಪಡೆದರೆ, ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ದ್ವಿತೀಯ ಹಾಗೂ ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜು ತೃತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ಎಂ.ಎ. ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು ಪ್ರಥಮ ಸ್ಥಾನ ಪಡೆದರೆ, ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ದ್ವಿತೀಯ ಹಾಗೂ ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು.

ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ಆದಿತ್ಯ ನಾಯ್ಕ, ಪೂಜಾ ಖಾರ್ವಿ ಹಾಗೂ ರೋಹಿತ ನಾಯ್ಕ ಅವರು ಬೋರ್ಡ್ ವಿಭಾಗದಲ್ಲಿ ವಿಜೇತರಾದರು. ಇದೇ ವೇಳೆ ಪೂಜಾ ಎಂ. ಖಾರ್ವಿ ಹಾಗೂ ಧೃತಿ ಜಿ. ನಾಯ್ಕ ಅವರು ಕರ್ನಾಟಕ ವಿಶ್ವವಿದ್ಯಾಲಯದ ಯುನಿವರ್ಸಿಟಿ ಬ್ಲೂ ಗೌರವಕ್ಕೆ ಆಯ್ಕೆಯಾಗಿರುವುದು ಕಾಲೇಜಿಗೆ ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.

ಪಂದ್ಯಾವಳಿಯ ನಿರ್ಣಾಯಕರಾಗಿ ಪ್ರಸನ್ನ ರಾವ್, ಉಪನಿರ್ಣಾಯಕರಾಗಿ ಧನರಾಜ ಖಾರ್ವಿ ಹಾಗೂ ರಾಷ್ಟ್ರೀಯ ಚೆಸ್ ತರಬೇತುದಾರ ಗುರುರಾಜ ಶೆಟ್ಟಿ ಕಾರ್ಯನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಶಾನಭಾಗ, ಟ್ರಸ್ಟಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಗ್ರಾಮ ಪಂಚಾಯತ್ ನೌಕರರ ವೇತನ ಕಡಿತಕ್ಕೆ ವಿರೋಧ: ಪರಿಷ್ಕೃತ ವೇತನ ಮುಂದುವರಿಸಲು ಸಂಘದ ಆಗ್ರಹ

ಮಣ್ಣಾಗುವ ಮುನ್ನವೇ ಕುಟುಂಬ ಸೇರಿದ ಅನಾಥ ಶವಗಳು