ಭಟ್ಕಳ ಡೈರಿ ವರದಿ

ಭಟ್ಕಳ: ಸಾವಿನ ನಂತರವೂ ತಮ್ಮವರ ಮುಖ ನೋಡದೆ, ಹೆಸರು-ಗುರುತು ಇಲ್ಲದ ಅನಾಥ ಶವಗಳಾಗಿ ಅಂತ್ಯ ಕಾಣುವ ದುರಂತದ ಅಂಚಿನಲ್ಲಿದ್ದ ಎರಡು ಶವಗಳಿಗೆ ಕೊನೆಗೂ ಕುಟುಂಬದವರೇ ಅಂತಿಮ ವಿದಾಯ ಸಲ್ಲಿಸುವಂತಾಗಿದೆ.

ಒಂದು ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೃಷ್ಣಕಾಂತ ಎಂಬುವವರ ಶವ ಪತ್ತೆಯಾಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ಮಂಕಿ ಮೂಲದ ಪ್ರಕಾಶ ಮಂಜುನಾಥ ನಾಯ್ಕ ಅವರ ಶವ ಪತ್ತೆಯಾಗಿತ್ತು. ಎರಡೂ ಕುಟುಂಬಗಳಿಗೆ ಶವಗಳನ್ನು ಹಸ್ತಾಂತರಿಸುವ ಮೂಲಕ ಅಂತಿಮ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜೀವನೋಪಾಯಕ್ಕಾಗಿ ಭಟ್ಕಳಕ್ಕೆ ಬಂದಿದ್ದ ಕೃಷ್ಣಕಾಂತ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೃಷ್ಣಕಾಂತ ಅವರು ತಮ್ಮ ಏಕೈಕ ಮಗಳಿಗೆ ಮದುವೆ ಮಾಡಿಕೊಟ್ಟ ಬಳಿಕ ಜೀವನೋಪಾಯಕ್ಕಾಗಿ ಭಟ್ಕಳಕ್ಕೆ ಬಂದಿದ್ದರು. ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರು, ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆಯಿಲ್ಲದೆ ರಾತ್ರಿ ವೇಳೆ ಬಸ್ ನಿಲ್ದಾಣದ ಅಂಗಡಿಗಳ ಪಕ್ಕದಲ್ಲೇ ಮಲಗುತ್ತಿದ್ದರು.

ಇತ್ತೀಚೆಗೆ ಅನಾರೋಗ್ಯದಿಂದ ಬಳಲಿದ್ದ ಅವರು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಆದರೆ ಅ. ೨೯ರಂದು ಬಸ್ ನಿಲ್ದಾಣದ ಅಂಗಡಿ ಸಮೀಪ ಮಲಗಿದ್ದಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಈ ಕುರಿತು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರು ಹಾಗೂ ಸಮಾಜಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ, ಲೈಫ್ ಕೇರ್ ಆಂಬುಲೆನ್ಸ್ ಮಾಲೀಕ ವಿನಾಯಕ್ ನಾಯ್ಕ ಅವರ ಸಹಕಾರದೊಂದಿಗೆ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುವ ವ್ಯವಸ್ಥೆ ಮಾಡಿದರು.

ಆಸ್ಪತ್ರೆಯ ಚೀಟಿ, ಸಾಮಾಜಿಕ ಜಾಲತಾಣದಿಂದ ಸಿಕ್ಕ ಸುಳಿವು: ಮೃತರ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆಸ್ಪತ್ರೆಯ ಒಪಿಡಿ ಚೀಟಿಯಲ್ಲಿದ್ದ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ನಂತರ ಮೃತದೇಹದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಗುರುತು ಪತ್ತೆಗೆ ನೆರವು ಕೋರಲಾಯಿತು.

ಕೃಷ್ಣಕಾಂತ ಅವರು ಆಗಾಗ್ಗೆ ಬೇರೆಯವರ ಮೊಬೈಲ್ ಬಳಸಿ ಕುಟುಂಬದವರಿಗೆ ಕರೆ ಮಾಡುತ್ತಿದ್ದ ಸಂಗತಿಯೂ ತನಿಖೆಗೆ ನೆರವಾಯಿತು. ಅವರ ಕುಟುಂಬದ ಸಂಪರ್ಕ ಸಂಖ್ಯೆ ಪರಿಚಯಸ್ಥರೊಬ್ಬರ ಬಳಿ ಲಭ್ಯವಿದ್ದ ಸುಳಿವಿನ ಆಧಾರದಲ್ಲಿ ಕುಟುಂಬಸ್ಥರಿಗೆ ಮಾಹಿತಿ ತಲುಪಿತು. ಸುದ್ದಿ ತಿಳಿದ ಕುಟುಂಬದವರು ತಕ್ಷಣ ಭಟ್ಕಳಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದರು. ಬಳಿಕ ತಮ್ಮ ಊರಿಗೆ ಕೊಂಡೊಯ್ದು ಅಂತಿಮ ವಿಧಿವಿಧಾನ ನೆರವೇರಿಸಿದರು.

ಮುಟ್ಟಳ್ಳಿ ಬೈಪಾಸ್‌ನಲ್ಲಿ ಪತ್ತೆಯಾಗಿದ್ದ ಪ್ರಕಾಶ ನಾಯ್ಕ ಶವ: ಇನ್ನೊಂದು ಪ್ರಕರಣದಲ್ಲಿ ಅಕ್ಟೋಬರ್ ೧೧ರಂದು ಮುಟ್ಟಳ್ಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಬದಿಯ ಗಟಾರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಶವ ಮುಖ ಸಂಪೂರ್ಣ ಕೊಳೆತು ವಿಕೃತಗೊಂಡಿದ್ದರಿಂದ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟವಾಗಿತ್ತು. ಈ ಕುರಿತು ಸಮಾಜಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಪಿಐ ದಿವಾಕರ ಪಿ.ಎಂ. ಹಾಗೂ ಪಿಎಸ್ಐ ನವೀನ ನಾಯ್ಕ ಅವರು ವಿಧಿವಿಜ್ಞಾನ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದ್ದರು.

ಶವವನ್ನು ಸಾಗಿಸುವ ವ್ಯವಸ್ಥೆಯಲ್ಲಿ ಮಂಜು ನಾಯ್ಕ ಮುಟ್ಟಳ್ಳಿ, ಲೈಫ್ ಕೇರ್ ಆಂಬುಲೆನ್ಸ್ ಮಾಲೀಕ ವಿನಾಯಕ ನಾಯ್ಕ ಹಾಗೂ ಸ್ಥಳೀಯರಾದ ಮೊಹಿದ್ದೀನ್ ಸಹಕರಿಸಿದ್ದರು. ಶವವನ್ನು ಮಣಿಪಾಲಕ್ಕೆ ಕೊಂಡೊಯ್ದು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು.

ಮಂಕಿ ಠಾಣೆಯ ನಾಪತ್ತೆ ಪ್ರಕರಣದಿಂದ ಪತ್ತೆಯಾದ ಗುರುತು: ಈ ನಡುವೆ ಪೊಲೀಸರ ತನಿಖೆಯ ವೇಳೆ ಪಕ್ಕದ ಮಂಕಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿರುವುದು ತಿಳಿದುಬಂದಿತ್ತು. ತಕ್ಷಣ ನಾಪತ್ತೆಯಾದ ವ್ಯಕ್ತಿಯ ಕುಟುಂಬಸ್ಥರನ್ನು ಸಂಪರ್ಕಿಸಿ, ಭಟ್ಕಳದಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ವಿಷಯ ತಿಳಿಸಲಾಯಿತು.

ಭಟ್ಕಳಕ್ಕೆ ಆಗಮಿಸಿದ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಶವವನ್ನು ಪರಿಶೀಲಿಸಿ, ಅದು ಹೊನ್ನಾವರ ತಾಲೂಕಿನ ಮಂಕಿ ಭಾಗದ ಪ್ರಕಾಶ್ ಮಂಜುನಾಥ ನಾಯ್ಕ ಅವರದ್ದೇ ಎಂದು ಗುರುತಿಸಿದರು. ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಮಂಕಿ ಗ್ರಾಮದಲ್ಲಿ ಕುಟುಂಬದವರು ಅಂತಿಮ ಸಂಸ್ಕಾರ ನೆರವೇರಿಸಿದರು.

ಕರ್ತವ್ಯಪ್ರಜ್ಞೆ ಮತ್ತು ಮಾನವೀಯತೆಗೆ ಸಾಕ್ಷಿಯಾದ ಘಟನೆ: ಒಂದು ಕಡೆ ಬದುಕಿನ ಬಂಡಿ ಸಾಗಿಸಲು ದೂರದ ಕೊಪ್ಪಳದಿಂದ ಭಟ್ಕಳಕ್ಕೆ ಬಂದಿದ್ದ ಕೃಷ್ಣಕಾಂತ. ಮತ್ತೊಂದು ಕಡೆ ಮುಟ್ಟಳ್ಳಿ ಬೈಪಾಸ್ ಗಟಾರದಲ್ಲಿ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಂಕಿ ಮೂಲದ ಪ್ರಕಾಶ ನಾಯ್ಕ. ಇಬ್ಬರ ಬದುಕಿನ ಹಿನ್ನೆಲೆ ಬೇರೆಬೇರೆಯಾಗಿದ್ದರೂ, ಸಾವಿನ ನಂತರ ಎದುರಾದ ಪರಿಸ್ಥಿತಿ ಮಾತ್ರ ಒಂದೇ. ಇಬ್ಬರೂ ಗುರುತು ಪತ್ತೆಯಾಗದೆ ಅನಾಥ ಶವಗಳಾಗಿ ಅಂತ್ಯ ಕಾಣುವ ಸಾಧ್ಯತೆಯಿತ್ತು.

ಆದರೆ ಪೊಲೀಸರ ಕರ್ತವ್ಯಪ್ರಜ್ಞೆ, ಸಮಾಜಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರ ನಿರಂತರ ಕಾಳಜಿ, ವಿನಾಯಕ ನಾಯ್ಕ ಅವರ ಆಂಬುಲೆನ್ಸ್ ಸಹಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಎರಡೂ ಶವಗಳ ಗುರುತು ಪತ್ತೆಯಾಗಿ ಕುಟುಂಬಸ್ಥರಿಗೆ ತಲುಪುವಂತಾಯಿತು. ಸಾವಿನಲ್ಲೂ ಗೌರವಯುತ ವಿದಾಯ ದೊರಕುವಂತೆ ಮಾಡಿದ ಈ ಕಾರ್ಯ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಅನಾಥ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ: ಭಟ್ಕಳದ ಮಂಜು ನಾಯ್ಕ ಮುಠಳ್ಳಿಗೆ ಸನ್ಮಾನ

ಪಿಎಲ್ಡಿ  ಬ್ಯಾಂಕ್ ಎದುರು ರಸ್ತೆ ಜಾರುವ ಸ್ಥಿತಿ: ಪೈಪ್‌ಲೈನ್ ದುರಸ್ತಿ ವಿಳಂಬ, ದ್ವಿಚಕ್ರ ವಾಹನ ಸವಾರರಿಗೆ ಅಪಾಯ