ಸೊರಬ : ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರದಲ್ಲಿ ಯಾವುದೇ ರೀತಿಯ ಹಣಕಾಸಿನ ತೊಂದರೆ ಇಲ್ಲ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರತಿದಿನ ನಾಲ್ಕು ಗ್ರಾಮ ಪಂಚಾಯತಿಗಳಂತೆ ಪ್ರತಿ ಗ್ರಾಮ ಪಂಚಾಯತಿಗಳಿಗೂ ಭೇಟಿ ನೀಡಲಾಗುವುದು. ತಂದೆ ಎಸ್. ಬಂಗಾರಪ್ಪ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ನಾನು ಅವರ ಆದರ್ಶವಾದದಿಂದ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಜನಸಾಮಾನ್ಯರ ಸೇವೆ ಮಾಡುವುದೆ ನನ್ನ ಗುರಿಯಾಗಿದೆ ಎಂದರು.
ತಾಲೂಕಿನ ರಸ್ತೆ, ಸಾರಿಗೆ, ಶಿಕ್ಷಣ, ಆರೋಗ್ಯ, ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಜನ ಸಾಮಾನ್ಯರ ಅಹ್ವಾಲುಗಳನ್ನು ಪಡೆದು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದರು.
2005 ರಿಂದ ಈಚೆಗೆ ನಡೆದ ಬಗರ್‍ಹುಕುಂ ಸಾಗುವಳಿಗೆ ನಾವು ಯಾವುದೇ ಭದ್ರತೆ ಕೊಡಲು ಸಾಧ್ಯವಿಲ್ಲ. ಅರಣ್ಯ ಮತ್ತು ಸರ್ಕಾರದ ಭೂಮಿ ವಿಚಾರದಲ್ಲಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಆ ನಿರ್ಣಯಕ್ಕೆ ಬದ್ಧರಾಗಬೇಕು. ಇನ್ನು ಮುಂದೆ ರೈತರು ಯಾವುದೇ ಕಾರಣಕ್ಕೂ ಭೂಮಿ ಒತ್ತೂವರಿಗೆ ಮುಂದಾಗಬಾರದು ಎಂದ ಅವರು, ವಿದ್ಯುತ್ ಸಮಸ್ಯೆ, ರಸ್ತೆ ಸ್ಥಿತಿ ಗತಿ, ಜಮೀನಿಗೆ ಹೋಗುವ ರಸ್ತೆ ಸಮಸ್ಯೆ, ಕಂದಾಯ ಇಲಾಖೆ ವಿಳಂಬ ನೀತಿ, ಆಶ್ರಯ ಮನೆ ವಿಚಾರದಲ್ಲಿನ ಗೊಂದಲದ ವಿಚಾರ ಕುರಿತು ಬಂದ ಮನವಿ, ದೂರಗಳಿಗೆ ಅಧಿಕಾರಿಗಳೊಂದಿಗೆ ಸ್ಪಷ್ಠೀಕರಣ ಕೇಳಿದರು.
ಕಾರ್ಯಕ್ರಮದಲ್ಲಿ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಸೊರಬ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಜೊತಾಡಿ, ತಾ.ಪಂ. ಮಾಜಿ ಅಧ್ಯಕ್ಷ ಹೆಚ್. ಗಣಪತಿ, ಜಿಪಂ ಮಾಜಿ ಸದಸ್ಯರಾದ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ, ವೀರೇಶ್ ಕೊಟಗಿ, ಲೋಕೇಶ್ ಗಾಳಿಪುರ, ಶಿವಮೂರ್ತಿ, ತಾಪಂ ಮಾಜಿ ಸದಸ್ಯ ಕೆ. ಮಂಜುನಾಥ್, ನಾಗರಾಜ್ ಚಿಕ್ಕಸವಿ, ಪುರುಷೋತ್ತಮ್, ಹಿರಿಯಣ್ಣ ಕಲ್ಲಂಬಿ, ಕೆ.ವಿ. ಗೌಡ, ಎಂ.ಡಿ. ಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ್ ಕುಪ್ಪಗಡ್ಡೆ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಶ್ರೀಧರ, ಪ್ರಶಾಂತ್ ಮೇಸ್ತ್ರಿ, ಮಂಡಗಳಲೆ ಹುಚ್ಚಪ್ಪ, ಅಬ್ದುಲ್ ರಶೀದ್ ಹಿರೇಕೌಂಶಿ, ಪ್ರಭು, ಸಾಜಿದ್ ಅಹ್ಮದ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.