ಕುಮಟಾ: ‘ಕನ್ನಡ ಸಾಹಿತ್ಯ ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತವಾಗಿದೆ. ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದು ಸಾಹಿತಿ ವೆಂಕಟೇಶ್ ಬೈಲೂರು ಹೇಳಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಲ್ಲಿಯ ಸರಕಾರಿ ನೌಕರರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುಮಟಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ : ವಿದ್ಯಾಂಜಲಿ ಪಬ್ಲಿಕ್ ಶಾಲೆ ಐಸಿಎಸ್ಇ ಪರೀಕ್ಷೆಯಲ್ಲಿ ಶೇ.೧೦೦ ಸಾಧನೆ
ಸಾಹಿತ್ಯ ಪರಿಷತ್ತಿನ ನಿಯಮಿತ ಕಾರ್ಯಚಟುವಟಿಕೆಗಳಿಂದ ಸಾಹಿತ್ಯ ಪ್ರೇಮ ವೃದ್ಧಿಸುವಂತೆ ಹೊಸ ಹೊಸ ಆಲೋಚನೆಗಳನ್ನು ಬಿತ್ತರಿಸಬೇಕು. ಆ ಮೂಲಕ ಹೊಸ ಬರಹಗಾರರನ್ನು ಮತ್ತು ಓದುಗರ ಸಂಖ್ಯೆ ಹೆಚ್ಚಾಗುವಂತೆ ಪ್ರೇರೇಪಿಸಬೇಕಾದ ಅಗತ್ಯ ಹಿರಿಯ ಬರಹಗಾರರ ಮೇಲಿದೆ ಎಂದು ಕಸಾಪ ಕುಮಟಾ ಘಟಕದ ಮಾಜಿ ಅಧ್ಯಕ್ಷ ಹಾಗೂ ರೋಟರಿ ಅಧ್ಯಕ್ಷ ಎನ್.ಆರ್.ಗಜು ಹೇಳಿದರು.
ಸಾಹಿತ್ಯ ಪರಿಷತ್ತಿನ ಸದಸ್ಯತ್ವದಿಂದ ತಾನು ಸಾಹಿತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತೆಂದು ಜಾನಪದ ಸಂಶೋಧಕ, ಸಾಹಿತಿ, ಯಕ್ಷಗಾನ ಕಲಾವಿದ ಮೋಹನ ನಾಯ್ಕ ಕೂಜಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಬರಹಗಾರ ಜಿತೇಂದ್ರ ಹರಿಕಾಂತ, ಹಿರಿಯ ಸದಸ್ಯರಾದ ವಸಂತ ಶೇಟ್, ಎಸ್.ಬಿ.ನಾಯ್ಕ, ಜಿಲ್ಲಾ ಕಸಾಪದ ಪಿ.ಎಂ.ಮುಕ್ರಿ ಮೊದಲಾದವರು ಪರಿಷತ್ತಿನ ಕೊಡುಗೆಗಳನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಕುಮಟಾ ಘಟಕದ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಸಾಹಿತ್ಯ ಪರಿಷತ್ತು ಸಾಗಿ ಬಂದ ದಾರಿಯನ್ನು ಮೆಲಕು ಹಾಕಿದರು. ಕಸಾಪ ಗೌರವ ಕೋಶಾಧ್ಯಕ್ಷ ವನ್ನಳ್ಳಿ ಗಿರಿ ಸ್ವಾಗತಿಸಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ ನಾಯಕ ವಂದಿಸಿದರು.