ಕುಮಟಾ:  22 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ನಿವೃತ್ತಿ ಹೊಂದಿ ಸ್ವಗ್ರಾಮ ಕುಮಟಾ ತಾಲೂಕಿನ ಹಳಕಾರಿಗೆ ಆಗಮಿಸಿದ ವೀರಯೋಧ ಶ್ರೀನಿವಾಸ ಗಂಗಾಧರ ಗುನಗಾ ಅವರನ್ನು ಕುಮಟಾ ಪಟ್ಟಣದ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಕುಮಟಾ ತಾಲೂಕಿನ ಹಳಕಾರದ ಶ್ರೀನಿವಾಸ ಗಂಗಾಧರ ಗುನಗಾ ಅವರು 2002 ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ನಿವೃತ್ತಿಯಾದ ಹಿನ್ನೆಲೆ ಮರಳಿ ಕುಮಟಾಕ್ಕೆ ಪಾದಸ್ಪರ್ಷ ಮಾಡಿದ ಶ್ರೀನಿವಾಸ ಗುನಗಾ ಅವರನ್ನು ಹಳಕಾರ ಗ್ರಾಮಸ್ಥರು, ವಿವಿಧ ಪಕ್ಷದ ರಾಜಕೀಯ ಮುಖಂಡರು, ವಿವಿಧ ಸಂಘಟನೆಯ ಪ್ರಮುಖರು, ಕುಮಟಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪುಷ್ಪಗುಚ್ಛ ನೀಡಿ ಗೌರವಿಸಿದರು. ಶ್ರೀನಿವಾಸ ಗುನಗಾ ಅವರ ಪತ್ನಿ ಶಿಲ್ಪಾ ಹಾಗೂ ಅವರ ಕುಟುಂಬಸ್ಥರು ಶ್ರೀ ಮಹಾಸತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕುಮಟಾ ಪಟ್ಟಣದ ಶ್ರೀ ಮಹಾಸತಿ ದೇವಸ್ಥಾನದಿಂದ ಪಟ್ಟಣದ ಹಳೆ ಬಸ್ ನಿಲ್ದಾಣ, ಮೂರಕಟ್ಟೆ, ಚಿತ್ರಗಿ ಮೂಲಕ ಹಳಕಾರ ಗುನಗನಕೊಪ್ಪದ ವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮೂರಿನ ಹೆಮ್ಮೆಯ ಪುತ್ರ ಶ್ರೀನಿವಾಸ ಗಂಗಾಧರ ಗುನಗಾ ಅವರು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ಚ್ಯುತಿ ಬಾರದಂತೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪೂರೈಸಿದ್ದಾರೆ. ಶ್ರೀನಿವಾಸ ಅವರ ತಂದೆ-ತಾಯಂದಿರು ಧೈರ್ಯವನ್ನು ಮಾಡಿ ತಮ್ಮ ಮಗನನ್ನು ದೇಶ ಸೇವೆಗೆ ಅಣಿಗೊಳಿಸುವ ಮೂಲಕ ಪುಣ್ಯದ ಕೆಲಸ ಮಾಡಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಲಿ ಎಂದರು.

ಇದನ್ನೂ ಓದಿ: ಸಚಿವರ ವಿರುದ್ಧ ಹೇಳಿಕೆಗೆ ಆರ್.ಎಚ್.ನಾಯ್ಕ ಆಕ್ಷೇಪ

ಜೆಡಿಎಸ್ ಮುಖಂಡ ಸೂರಜ್ ಸೋನಿ ಮಾತನಾಡಿ, ಶ್ರೀನಿವಾಸ ಗುನಗಾ ಅವರನ್ನು ಹಳಕಾರ ಗ್ರಾಮ ಸೇರಿ ಇಡೀ ಕುಮಟಾ ಜನತೆ ಆದರದಿಂದ ಬರಮಾಡಿಕೊಂಡಿದೆ. ಕುಮಟಾದಲ್ಲಿ ಸೈನಿಕರು ತನ್ನೂರಿಗೆ ಆಗಮಿಸುತ್ತಾರೆ ಎಂದರೆ ಹಬ್ಬದಂತೆ ಅವರನ್ನು ಜನತೆ ಹಾಗೂ ಮಾಜಿ ಸೈನಿಕರಾದಿಯಾಗಿ ಸ್ವಾಗತಿಸುವುದು ಸಂಪ್ರದಾಯ. ಸೈನಿಕರನ್ನು ಗೌರವಿಸುವ ಸಂಪ್ರದಾಯವು ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು.

ನಿವೃತ್ತ ಸೈನಿಕ ನವೀನ ನಾಯ್ಕ ಮಾತನಾಡಿ, ವೀರಯೋಧ ಶ್ರೀನಿವಾಸ ಗುನಗಾ ಅವರಿಗೆ ಕುಮಟಾ ನಿವೃತ್ತ ಸೈನಿಕರ ಪರವಾಗಿ ಸ್ವಾಗತಿಸುತ್ತೇನೆ. ಒಬ್ಬ ಸೈನಿಕ ಸೇವಾ ನಿವೃತ್ತಿ ಹೊಂದಿ ತನ್ನೂರಿಗೆ ಮರಳುತ್ತಿರುವುದನ್ನು ತಿಳಿದು ಜನಪ್ರತಿನಿಧಿಗಳು ಹಾಗೂ ಎಲ್ಲಾ ಯುವ ಜನತೆ ಸ್ವಾಗತಿಸಿರುವುದು ಹೆಮ್ಮೆಯ ಸಂಗತಿ. ಕುಮಟಾದ ಯುವ ಜನತೆಯನ್ನು ಸೈನ್ಯಕ್ಕೆ ಸೇರಿಸುವ ನಿಟ್ಟಿನಲ್ಲಿ ಈಗಾಗಲೆ ಕಾರ್ಯನಿರ್ವಹಿಸುತ್ತಿದ್ದು, ಶ್ರೀನಿವಾಸ ಅವರೂ ಸಹ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದರು.
ಶ್ರೀನಿವಾಸ ಗುನಗಾ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಯುವಜನತೆ ಸೇನೆಗೆ ಸೇರಲು ಮನಸ್ಸು ಮಾಡಬೇಕು. ಇಂದಿನ ಯುವ ಪೀಳಿಗೆ ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಈ ದಿನ ಕುಮಟಾ ಹಾಗೂ ನನ್ನೂರಿನ ಜನ ನನ್ನನ್ನು ಸ್ವಾಗತಿಸಿರುವುದು ಎಲ್ಲರಿಗೂ ಪ್ರೇರಣೆಯಾಗಲಿ. ಹಲವು ವರ್ಷಗಳ ಪ್ರಾಮಾಣಿಕ ಸೇವೆಗೆ ಸಂದ ಗೌರವವಾಗಿದೆ. ದೇಶದ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಲಿ ಎಂದರು.
ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಜನರು, ನಿವೃತ್ತ ಯೋಧನ ಮೇಲೆ ಹೂವಿನ ಸುರಿಮಳೆಗೈದು ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಮಾರ್ಗದುದ್ದಕ್ಕೂ ಅವರ ಅಭಿಮಾನಿಗಳು, ದೇಶಭಕ್ತರು, ಹೂವಿನ ಹಾರ ಹಾಕಿ ಗೌರವಿಸುವ ಮೂಲಕ ವೀರ ಯೋಧನಿಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: ಬಿಜೆಪಿಗೆ ಆಗ ಸಾವರ್ಕರ ಮೇಲೆ ಇಲ್ಲದ ಪ್ರೇಮ ಈಗ ದಿಢೀರ್ ಹೇಗೆ ಬಂತು?

ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ, ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ, ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ್ ಗಾಂವಕರ್, ರಾಜು ಭಂಡಾರಿ, ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.

ಮೆರವಣಿಗೆ ನಂತರ ನಿವೃತ್ತ ಯೋಧ ಶ್ರೀನಿವಾಸ ಗುನಗಾ ಅವರ ತವರೂರಾದ ಹಳಕಾರ ಗುನಗನಕೊಪ್ಪದ ಶಾಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.