ಹೊನ್ನಾವರ: ಕಾಸರಕೋಡ ಟೊಂಕಾ ಪ್ರದೇಶದಲ್ಲಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಹೈಟೈಡ್ ಲೈನ್ ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆಂದು 20ಕ್ಕೂ ಅಧಿಕ ಮೀನುಗಾರರ ಮೇಲೆ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.


ಬುಧವಾರ ಟೊಂಕಾ ಪ್ರದೇಶದಲ್ಲಿ ಮುಂಜಾನೆ 10 ಗಂಟೆಯಿಂದ ಸಹಾಯಕ ಆಯುಕ್ತೆ ನಯನಾ ಎನ್ ಹಾಗೂ ತಹಶೀಲ್ದಾರ ರವಿರಾಜ ದೀಕ್ಷಿತ್ ಬಂದರು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹೈಟೈಡ್ ಲೈನ್ ಸರ್ವೆ ಕಾರ್ಯಕ್ಕೆ ಮುಂದಾಗುತ್ತಿದ್ದಂತೆ ಆಂಜನೇಯ ದೇವಸ್ಥಾನದ ಸನಿಹದಲ್ಲಿ ಮೀನುಗಾರರು ತಡೆದು ಪ್ರತಿಭಟನೆ ನಡೆಸಿದ್ದರು. ಮಧ್ಯಾಹ್ನದವರೆಗೆ ಮೀನುಗಾರರು ಹಾಗೂ ಅಧಿಕಾರಿಗಳ ಮೇಲೆ ಮಾತಿನ ಚಕಮಕಿ ನಡೆದು ಸಾಯಂಕಾಲ ಸಮಯದಲ್ಲಿ ಪೊಲೀಸರು ಮೀನುಗಾರರನ್ನು ವಶಕ್ಕೆ ಪಡೆಯಲು ಮುಂದಾದರು. ಈ ಸಮಯದಲ್ಲಿ ಮೀನುಗಾರರು ಸೇರಿದಂತೆ ಪೊಲೀಸರಿಗೂ ಗಾಯವಾಗಿತ್ತು. ಬುಧವಾರ ತಡರಾತ್ರಿ ಆರು ಜನ ಪೊಲೀಸರ ಮೇಲೆ ಹಲ್ಲೆಯಾಗಿದೆ. ಸರ್ಕಾರದ ಅದೇಶದಂತೆ ಕಾಮಗಾರಿ ನಡೆಸುವ ಸಮಯದಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ, ನಿಂದನೆ, ಜೀವಬೆದರಿಕೆ, ಹಲ್ಲೆ ಮಾಡಿದ್ದಾರೆ ಎಂದು ೨೦ಕ್ಕೂ ಅಧಿಕ ಮೀನುಗಾರರ ಸಹಿತ 100ರಿಂದ 150ಕ್ಕೂ ಹೆಚ್ಚಿನ ಜನರ ಮೇಲೆ ಪ್ರಕರಣ ದಾಖಲಾಗಿದೆ.