ಭಟ್ಕಳ : ತಾಲೂಕಿನ ಬೇಂಗ್ರೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಸಾರ್ವಜನಿಕರು ತಕರಾರು ಎತ್ತಿದ್ದು, ತಕ್ಷಣ ಗಣಿಕಾರಿಕೆ ನಿಲ್ಲಿಸುವಂತೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ಪಂಚಾಯತ್ ರಾಜ್ ನೌಕರರ ಮನವಿ
ಬೇಂಗ್ರೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದೆ. ಇದರಿಂದ ಜನಜೀವನ ಮತ್ತು ಕೃಷಿ ಚಟುವಟಿಕೆಗಳಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಇದು ಹೀಗೆ ಮುಂದುವರೆದರೆ ಒಂದು ಹೊತ್ತಿನ ಊಟಕ್ಕೂ ಸಹ ಪರದಾಡುವ ಪರಿಸ್ಥಿತಿ ತಲೆದೋರಬಹುದು. ಆ ಜಾಗದಲ್ಲಿ ಈ ಹಿಂದೆ IRB ಕಂಪನಿಯವರು ಗಣಿಗಾರಿಕೆ ಮತ್ತು ಬ್ಲಾಸ್ಟಿಂಗ್ ನಡೆಸಿ ಕನಿಷ್ಠ ಎರಡು ಎಕರೆ ಜಾಗದಲ್ಲಿ ದೊಡ್ಡ ಗಣಿಗಾರಿಕೆ ಹೊಂಡ ತೋಡಿದ್ದು ಅಸಂಖ್ಯಾತ ಸಾವು ನೋವುಗಳು ಸಂಭವಿಸಿದೆ. ಆದ್ಯಾಗಿಯೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಗಲು ದರೋಡೆ ನಡೆಸಿ, ಸರಕಾರದ ಆಸ್ತಿಗೆ ಕನ್ನ ಹಾಕುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತಕ್ಕೆ ತೆರಳಿ ಮಾಹಿತಿ ಕೇಳಿದರೆ ಯಾವುದೇ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಿರುವುದಿಲ್ಲ ಎಂದು ಹೇಳಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಈ ವಿಡಿಯೋ ನೋಡಿ : ಖಾನಾಪುರದಲ್ಲಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಆಕ್ರೋಶ https://fb.watch/qEqkvgFI20/?mibextid=Nif5oz
ಬೇಂಗ್ರೆ ಗ್ರಾಮ ಪಂಚಾಯಿತಿ ಸಾರ್ವಜನಿಕರು ಕಳೆದ ಹತ್ತು ವರ್ಷಗಳಿಂದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹಲವು ನೋವನ್ನು ಸಹಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆಗೆ ಆಸ್ಪದ ನೀಡಬಾರದು. ಗಣಿಗಾರಿಕೆ ಪ್ರದೇಶದಿಂದ ಕೂದಳತೆ ದೂರದಲ್ಲಿ ಮಲ್ಲಾರಿ ಶಾಲೆಯಿದ್ದು, ಶಾಲೆಯಲ್ಲಿ ಅಂದಾಜು 50 ಮಕ್ಕಳು ಕಲಿಯುತ್ತಿದ್ದಾರೆ. ಪಕ್ಕದ ಅಂಗನವಾಡಿಯಲ್ಲಿ ಏನೂ ತಿಳಿಯದ ಕನಿಷ್ಟ 20 ಕಂದಮ್ಮಗಳು ಕಲಿಯುತ್ತಿದ್ದಾರೆ. ಸಾರ್ವಜನಿಕರಿಗೆ ಮತ್ತು ರೈತಾಪಿ ವರ್ಗದವರಿಗೆ ಗಣಿಗಾರಿಕೆಯಿಂದ ಅನುಭವಿಸಿದ ನೋವು ಮರೆಯುವ ಮುನ್ನವೇ ಈಗ ಗಣಿಗಾರಿಕೆ ಪ್ರಾರಂಭದ ಸೂಚನೆ ದೊರೆತಿದೆ. ಇದು ಯಾವುದೇ ಕಾರಣಕ್ಕೂ ಸಹಿಸಲು ಆಗುವುದಿಲ್ಲ. ಮುಂದೆ ಹೀಗೆಯೇ ಮುಂದುವರೆಯದಲ್ಲಿ ಅಥವಾ ಗಣಿಗಾರಿಕೆ ಆರಂಭವಾದಲ್ಲಿ ಎಂತಹ ಪ್ರತಿಭಟನೆಗೂ ನಾವು ಸಿದ್ಧರಿದ್ದೇವೆ. ಪ್ರಾಣ ಹೋದರೂ ಸರಿಯೇ ಬೇಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಮೇಘನಾ ಕಾಮತ, ಭಾಸ್ಕರ ಗೊಯ್ದಪ್ಪ ನಾಯ್ಕ, ಆದರ್ಶ ಮಂಜುನಾಥ ನಾಯ್ಕ, ಶಂಕರ ಮಂಜಪ್ಪ ನಾಯ್ಕ ಮತ್ತಿತರರು ಇದ್ದರು.