ಭಟ್ಕಳ: ತಾಲೂಕಿನಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ವರುಣಾರ್ಭಟ ಜೋರಾಗಿದೆ. ರವಿವಾರ ಬೆಳ್ಳಿಗ್ಗೆಯಿಂದ ಕೂಡ ಸುರಿಯುತ್ತಿರುವ ಗಾಳಿಮಳೆಗೆ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಖಲೀಫಾ ಸ್ವೀಟ್‌ನ ಸಿದ್ದಿಕಾ ಅಲ್ತಾಫ್ ಅವರ ಮನೆ ಸಂಪೂರ್ಣ ಕುಸಿದು ಹಾನಿಯಾಗಿದೆ. ಮನೆಯ ಪಕ್ಕದಲ್ಲಿಯೇ ಇದ್ದ ಶರೀಫಾ ಬಿಬಿ ಅಮೀನಾ ಅವರ ಮನೆ ಕೂಡ ಭಾಗಶಃ ಹಾನಿಯಾಗಿದೆ. ಬೆಳ್ನಿಯ ಚಂದ್ರಾವತಿ ಗೋವಿಂದ ಖಾರ್ವಿ ಮನೆಯ ಮೇಲೆ ಮರವೊಂದು ಬಿದ್ದ ಪರಿಣಾಮ ಭಾಗಶಃ ಹಾನಿಯಾಗಿದೆ. ಬೆಂಗ್ರೆಯ ಪಾರ್ವತಿ ಹನುಮಂತ ನಾಯ್ಕ ಅವರ ಮನೆಯ ಮೇಲಾವಣಿ ಮಾಡು ಮುರಿದು ಭಾಗಶಃ ಹಾನಿಯಾಗಿದೆ. ತಲಗೋಡ ಗ್ರಾಮದಲ್ಲಿ ಬೀಸಿದ ಭಾರೀ ಗಾಳಿಗೆ ಬಿಳಿಯಮ್ಮ ಮಾಸ್ತಪ್ಪ ನಾಯ್ಕ ಎನ್ನುವವರ ಮನೆಯ ಹೆಂಚು ಹಾರಿ ಹೋಗಿದೆ. ಮಾರುಕೇರಿ ಕೋಟಖಂಡ ಗ್ರಾಮದ ರಾಮ ಕುಪ್ಪ ಗೊಂಡ ಅವರ ದನದ ಕೊಟ್ಟಿಗೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಹಾನಿಯಾಗಿರುವ ಎಲ್ಲ ಪ್ರದೇಶಗಳಿಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟನೆ

ಶುಕ್ರವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ರವಿವಾರ ಕೂಡಾ ಮುಂದುವರಿದಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿನ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದೆ. ಹಲವರ ಗದ್ದೆ ತೋಟ ಮುಳುಗಡೆಯಾಗಿದೆ. ಇನ್ನೂ ಹಲವು ಮನೆಗಳು, ರಸ್ತೆ, ಕಾಲುಸಂಕಗಳು ಅಪಾಯದ ಅಂಚಿನಲ್ಲಿವೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಹಲವೆಡೆ ಸಂಪರ್ಕಕ್ಕೆ ತೊಂದರೆಯಾಗಿದೆ.

ಇದನ್ನೂ ಓದಿ : ಹಳೆಯ ಪಿಂಚಣಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ನಗರದ ರಂಗಿನಕಟ್ಟೆಯ ರಾಷ್ಟ್ರೀಯ ಹೆದ್ದಾರಿಯ ಶುಕ್ರವಾರ ತಡರಾತ್ರಿ ಭಾರೀ ಪ್ರಮಾಣದಲ್ಲಿ ನೀರು ನಿಂತ ಕಾರಣ ದೂರ ದೂರ ಹೋಗುವ ವಾಹನ ಸವಾರರು ಕೊಂಚ ಭಯದಿಂದಲೇ ವಾಹನ ಚಲಾಯಿಸುವಂತಾಯಿತು. ತಾವು ರಾಷ್ಟ್ರೀಯ ಹೆದ್ದಾರಿಯನ್ನು ಬಿಟ್ಟು ಹಳ್ಳಕ್ಕೆ ಇಳಿದಿದ್ದೇವೆಯೇ ಎನ್ನವ ಕುರಿತೂ ಚಿಂತಿಸುವಷ್ಟು ನೀರು ಹೆದ್ದಾರಿಯ ಮೇಲಿತ್ತು ಶನಿವಾರ ಬೆಳಿಗ್ಗೆ ಪುರಸಭೆಯಿಂದ ಗಟಾರು ಸ್ವಚ್ಚಗೊಳಿಸಿ ನೀರು ಸುಗಮವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ಆದರೆ ಸ್ವಲ್ಪ ದೊಡ್ಡ ಮಳೆ ಬಂದರೆ ಮತ್ತದೇ ಗೋಳು ಎನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ.

ಇದನ್ನೂ ಓದಿ : ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಸಾಗರ

ಜಾಲಿ ಪಟ್ಟಣ ಪಂಚಾಯತಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಅದನ್ನು ತಕ್ಷಣ ತೆರವುಗೊಳಿಸಲಾಯಿತು.

ಇದನ್ನೂ ಓದಿ : ಅವೈಜ್ಞಾನಿಕ ಕಾಮಗಾರಿಯಿಂದ ದೇವಸ್ಥಾನದ ಗರ್ಭಗುಡಿ ಕುಸಿತ

ಮಳೆ ಮುಂದುವರೆದಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ತಾಲೂಕಾ ಆಡಳಿತ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದುಕೊಂಡು ಗ್ರಾಮೀಣ ಭಾಗದ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ.